ಕರಾವಳಿ

ಪೈಲಟ್‌ನ ಸಮಯಪ್ರಜ್ಞೆ : ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಮಾರ್ಚ್.15: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭಾವ್ಯ ಭಾರೀ ದುರಂತವೊಂದು ಪೈಲಟ್‌ನ ಸಮಯ ಪ್ರಜ್ಞೆಯಿಂದ ತಪ್ಪಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಪ್ರಯಾಣಿಕರನ್ನು ಹೊತ್ತು ಟೇಕಾಪ್ ಗೆ ಸಿದ್ಧಗೊಳ್ಳುತ್ತಿದ್ದಂತೆ ವಿಮಾನದ ಎಂಜಿನಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಇದು ಪೈಲಟ್ನ ಗಮನಕ್ಕೆ ಬಂದ ಕಾರಣ ತಕ್ಷಣ ವಿಮಾನ ಹಾರಾಟವನ್ನು ರದ್ದುಗೊಳಿಸುವ ಮೂಲಕ 31 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ಬುಧವಾರ ಬೆಳಗ್ಗೆ 8:50ಕ್ಕೆ 31 ಪಯಣಿಗರನ್ನು ಒಳಗೊಂಡ ಸ್ಪೈಸ್ ಜೆಟ್ ವಿಮಾನವೊಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಹಾರಾಡಲು ಸಿದ್ಧವಾಗಿತ್ತು. ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿಸಿಕೊಂಡು ವಿಮಾನವು ರನ್ ವೇ ಕಡೆಗೆ ತೆರಳುತ್ತಿದ್ದಂತೆ ಅದರ ಎಂಜಿನ್ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಎಂಜಿನ್ನಿಂದ ದಟ್ಟ ಹೊರ ಬರಲಾರಂಭಿಸಿದೆ. ಇದರಿಂದ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುವ ಭೀತಿ ಎದುರಾಗಿತ್ತು. ಇದು ಪೈಲಟ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೈಲಟ್ ವಿಮಾನ ಹಾರಾಟವನ್ನು ತಡೆಹಿಡಿದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಹಾಗೂ ತುರ್ತು ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ಪ್ರಯಾಣಿಕರನ್ನು ಕೆಳಗಿಸುವಲ್ಲಿ ಯಶಸ್ವಿಯಾದರು.

ವಿಮಾನದ ಎಂಜಿನ್ನಿಂದ ಹೊಗೆ ಕಾಣಿಸಿಕೊಂಡಿರುವುದು ಪೈಲಟ್ನ ಗಮನಕ್ಕೆ ಬಾರದೇ ಹೋಗಿದ್ದರೆ, ವಿಮಾನವು ಕೆಲವೇ ಕ್ಷಣಗಳಲ್ಲಿ ಟೇಕಾಫ್ ಆಗಿ ದೊಡ್ಡ ಮಟ್ಟದ ದುರಂತ ಸಂಭವಿಸುವ ಅಪಾಯವಿತ್ತು. 70ಕ್ಕೂ ಅಧಿಕ ಪ್ರಯಾಣಿಕರ ಸಾಮರ್ಥ್ಯದ ಈ ವಿಮಾನದಲ್ಲಿ ಕೇವಲ 31 ಪ್ರಯಾಣಿಕರಷ್ಟೇ ಇದ್ದಿದ್ದರಿಂದ ವಿಮಾನ ಅಪಾಯಕ್ಕೆ ಸಿಲುಕಿದ ತಕ್ಷಣ ಎಲ್ಲರನ್ನು ಕೆಳಗಿಳಿಸಲು ಸಾಧ್ಯವಾಗಿದೆ. ಬಳಿಕ ಆ ಪ್ರಯಾಣಿಕರನ್ನು ಬೇರೆ ವಿಮಾನಗಳಲ್ಲಿ ಹೈದರಾಬಾದ್ಗೆ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.