ಕರಾವಳಿ

ಮಂಗಳೂರಿನಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ : ಸಿಸಿಬಿ ಪೊಲೀಸರಿಂದ ಓರ್ವನ ಸೆರೆ

Pinterest LinkedIn Tumblr

ಮಂಗಳೂರು, ಮಾರ್ಚ್.15: ಮಂಗಳೂರಿನಲ್ಲಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ ತಯಾರಿ ಜಾಲವನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ತೊಕ್ಕೊಟ್ಟು ಟಿಸಿ ರಸ್ತೆಯಲ್ಲಿರುವ ಮ್ಯಾಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈಯನ್ಸ್ (ಎಂಐಟಿಎಸ್) ಎಂಬ ಹೆಸರಿನ ಸಂಸ್ಥೆಯಲ್ಲಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ ತಯಾರಿ ಜಾಲವನ್ನು ಪತ್ತೆಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಟಿ.ಸಿ.ರಸ್ತೆಯ ಹೋಲಿ ಕ್ರಾಸ್ ನಿವಾಸಿ ಗೋಡ್ವಿನ್ ಡಿಸೋಜ (33) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು 10 ಸಾವಿರದಿಂದ 45,000 ರೂ.ವರೆಗೆ ನಕಲಿ ಅಂಕಪಟ್ಟಿ ಹಾಗೂ ಸರ್ಟಿಫೀಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಅಸ್ಕಾನ್ ಶೇಖ್ ಎಂಬಾತನು ಈ ಸಂಸ್ಥೆಯನ್ನು ನಡೆಸುತ್ತಿದ್ದು, ಈತನೇ ಇದರ ನಿರ್ದೇಶಕ ಹಾಗೂ ಪ್ರಾಂಶುಪಾಲನಾಗಿದ್ದಾನೆ. ಬಂಧಿತ ಆರೋಪಿಯು ಇಲ್ಲಿ ಕೆಲಸ ಮಾಡುತ್ತಿದ್ದ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

2016ರಿಂದ ಈ ಸಂಸ್ಥೆಯನ್ನು ನಡೆಸುತ್ತಿರುವ ಆರೋಪಿಯು ಎಸೆಸೆಲ್ಸಿ, ಪಿಯುಸಿ, ಡಿಗ್ರಿ, ಡಿಪ್ಲೊಮಾ ಹೀಗೆ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಕೊಡುತ್ತಿದ್ದ ಎನ್ನಲಾಗಿದೆ. ಆರೋಪಿಗಳು ವಾರದೊಳಗೆ ನಕಲಿ ಅಂಕಪಟ್ಟಿಗಳನ್ನು ತಯಾರಿಸಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ. ಎಸೆಸೆಲ್ಸಿ ಮತ್ತು ಪಿಯುಸಿ ನಕಲಿ ಸರ್ಟಿಫಿಕೇಟ್ಗೆ 10,000 ರೂ. ಮತ್ತು ಡಿಗ್ರಿ ಹಾಗೂ ಡಿಪ್ಲೊಮಾ ಸರ್ಟಿಫಿಕೇಟ್ಗೆ 45,000 ರೂ. ದರ ನಿಗದಿಪಡಿಸುತ್ತಿದ್ದ ಎನ್ನಲಾಗಿದೆ.

ಆರೋಪಿಗಳು ಮಂಗಳೂರು ಪಬ್ಲಿಕ್ ಸ್ಕೂಲ್ ಎಂಬ ನಕಲಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಎಸೆಸೆಲ್ಸಿ ವ್ಯಾಸಂಗ ಮಾಡಿರುವ ಬಗ್ಗೆ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸಿ ಅಂಕಪಟ್ಟಿಗಳನ್ನು ತಯಾರಿಸಿ ಕೊಡುತ್ತಿದ್ದರು. ಈ ಸಂಸ್ಥೆಯಿಂದ ಸುಮಾರು 150 ಕ್ಕೂ ಹೆಚ್ಚು ಮಂದಿ ಎಸೆಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ, ಬಿಟೆಕ್ ಪದವಿಗಳ ನಕಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದೆ.

ಮ್ಯಾಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈಯನ್ಸ್ (ಎಂಐಟಿಎಸ್)ಎಂಬ ಸಂಸ್ಥೆಯನ್ನು 2016ರ ಜೂನ್ನಲ್ಲಿ ಪ್ರಾರಂಬಿಸಿದ್ದು, ಈ ಸಂಸ್ಥೆಯಲ್ಲಿ 2013ನೆ ಇಸವಿಯಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂದು ನಕಲಿ ಸರ್ಟಿಫೀಕೇಟ್ಗಳನ್ನು ತಯಾರಿಸಿ ಹಣವನ್ನು ಪಡೆದು ಹಲವಾರು ಅಭ್ಯರ್ಥಿಗಳಿಗೆ ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿ ಗೋಡ್ವಿನ್ ಡಿಸೋಜನಿಂದ ನಕಲಿ ಸರ್ಟಿಫಿಕೆಟ್ಗಳು, ಲ್ಯಾಪ್ಟಾಪ್, 3 ನಕಲಿ ಸೀಲುಗಳು, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪ್ರಿಂಟರ್, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪೇಪರ್, ಮೊಬೈಲ್ ಫೋನ್ನ್ನು ವಶಪಡಿಸಿಕೊಳ್ಳಲಾಗಿದೆ.

ಈ ನಕಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಸ್ಕಾನ್ ಶೇಖ್ ಎಂಬಾತ ಈ ಹಿಂದೆ ಕದ್ರಿ ಠಾಣಾ ವ್ಯಾಪ್ತಿಯ ಪಂಪ್ವೆಲ್ ಬಳಿ ಮ್ಯಾಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಂಜಿನಿಯರಿಂಗ್ ಎಂಬ ಸಂಸ್ಥೆಯಲ್ಲಿ ಎಜುಎಕ್ಸೆಲ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆಯನ್ನು ತೆರೆದು ಅಲ್ಲೂ ಕೂಡ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ. 2016ರಲ್ಲಿ ಸಿಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ. ಇದೀಗ ಮತ್ತೆ ಈತನ ಬಣ್ಣ ಬಯಲಾಗಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ್, ಎಸ್ಸೈ ಶ್ಯಾಮ್ ಸುಂದರ್, ಕಬ್ಬಾಳ್ರಾಜ್ ಹಾಗೂ ಉಳ್ಳಾಲ ಎಸ್ಸೈ ಗುರಪ್ಪ ಕಾಂತಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.

ವರದಿ ಕೃಪೆ : ವಾಭಾ

Comments are closed.