ಕರಾವಳಿ

ಮಂಗಳೂರು ಶೂಟೌಟ್ ಪ್ರಕರಣ : ಹಲವು ಪ್ರಕರಣಗಳ ಆರೋಪಿ, ಕಲಿ ಯೋಗೀಶನ ಸಹಚರ ಹನೀಫ್ ಮುಹಮ್ಮದ್ ಮುನ್ನನ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್.14: ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಕಲಿ ಯೋಗೀಶನ ಮತ್ತೊಬ್ಬ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಾಂತರಾಮ್ ನೇತೃತ್ವದ ತಂಡ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಸುಂಕದಕಟ್ಟೆಯ ಕುರುಡಪದವಿನ ಮುಹಮ್ಮದ್ ಹನೀಫ್ ಯಾನೆ ಮುಹಮ್ಮದ್ ಆಲಿ ಯಾನೆ ಮುನ್ನಾ (35) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ 2017ರ ಡಿಸೆಂಬರ್ನಲ್ಲಿ ಬಂದರು ಠಾಣಾ ವ್ಯಾಪ್ತಿಯ ಕಾರ್ಸ್ಟ್ರೀಟ್ ಸಂಜೀವ ಶೆಟ್ಟಿ ಟೆಕ್ಸ್ ಟೈಲ್ಸ್ ಬಟ್ಟೆ ಮಳಿಗೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದನು.

ಈ ಹಿಂದೆ ಕಲಿ ಯೋಗೀಶನ ಜೊತೆ ನೇರ ಸಂಪರ್ಕದಲ್ಲಿದ್ದು, ಈತನ ವಿರುದ್ದ ಮಂಗಳೂರು ನಗರ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಕೊಲೆ ಬೆದರಿಕೆ ಪ್ರಕರಣ, ಕುಂಬಳೆ ಪೊಲೀಸ್ ಠಾಣೆಯಲ್ಲಿ ಹಫ್ತಾ ಹಣಕ್ಕಾಗಿ ಕೊಲೆಯತ್ನ ಪ್ರಕರಣ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಪ್ರಕರಣ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಹೀಗೆ 10 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಈತನು ನ್ಯಾಯಾಲಯದಿಂದ ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಹೊರಡಿಸಿದೆ. ಈ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡ ಬಳಿಕ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಹಫ್ತಾ ಹಣಕ್ಕಾಗಿ ಬೆದರಿಕೆಯೊಡ್ಡಿದ್ದ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೆ ಕೇರಳದಲ್ಲಿ ಈತನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಈತನು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.