ಉಡುಪಿ: ಖಾಸಗಿ ಬಸ್ಸಿನ ಚಾಲಕನ ಅತಿವೇಗ ಹಾಗೂ ಓವರ್‌ಟೇಕ್ ಅಬ್ಬರದಿಂದಾಗಿ ಬಸ್ ಪಲ್ಟಿಯಾದ ಘಟನೆ ಉಡುಪಿ ತಾಲೂಕು ಹೆಜಮಾಡಿ ಗ್ರಾಮದ ಪರಿವಾರ ಡಾಬಾದ ಬಳಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದಿದ್ದು ಹಲವರು ಗಾಯಗೊಂಡಿದ್ದಾರೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಬಸ್ಸನ್ನು ಅದರ ಚಾಲಕ ಸಂತೋಷ್ ಎಂಬಾತ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೊದಲಿಗೆ ಪ್ರಕಾಶ್ ಆಚಾರ್ (42) ಚಲಾಯಿಸುತ್ತಿದ್ದ ಬೈಕ್ ಓವರ್‌ಟೇಕ್ ಮಾಡಿ, ನಂತರ ಇನ್ನೊಂದು ಲಾರಿಯನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದು, ಆಗ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಗ್ಗು ಜಾಗಕ್ಕೆ ಮಗುಚಿ ಬಿದ್ದ ಪರಿಣಾಮ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 5-6 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಚಿಕಿತ್ಸೆಯ ಸಲುವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.