ಕರಾವಳಿ

ಮಾರ್ಚ್ 15 : ಮಂಗಳೂರು ತುಳು ಭವನದಲ್ಲಿ “ಸುಗ್ಗಿ-ಹುಗ್ಗಿ” ಕಾರ್ಯಕ್ರಮ

Pinterest LinkedIn Tumblr

ಮಂಗಳೂರು ಮಾರ್ಚ್ 12 :ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ, ಮಾರ್ಚ್ 15 ರಂದು ಸಿರಿ ಚಾವಡಿ ತುಳು ಭವನ ಉರ್ವಸ್ಟೋರ್ ಮಂಗಳೂರಿನಲ್ಲಿ “ಸುಗ್ಗಿ-ಹುಗ್ಗಿ” ಕಾರ್ಯಕ್ರಮವು ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಲಿರುವರು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಮೇಯರ್ ಭಾಸ್ಕರ್ ಕೆ., ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಮತ್ತಿತರರು ಭಾಗವಹಿಸಲಿರುವರು.

ಜಿಲ್ಲೆಯ ಹಿರಿಯ ಶ್ರೇಣಿಯ ಕಲಾವಿದರು ಮತ್ತು ತಂಡಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ಆಯ್ದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲ್ಪಡುತ್ತವೆ.

ದಿನವಿಡೀ ನಡೆಯುವ ಈ ಕಾರ್ಯಕ್ರಮದ ಲ್ಲಿ ಡೊಳ್ಳು ಕುಣಿತ, ಕಂಸಾಳೆ, ಚೆಂಡೆವಾದನ, ಜಾನಪದ ನೃತ್ಯ, ನಾದಸ್ವರ, ಪೂಜಾ ಕುಣಿತ, ಹುಲಿವೇಷ, ಜನಪದ ಸಂಗೀತ, ಕರಂಗೋಲು, ಸುಗ್ಗಿ ಕುಣಿತ, ಕೃಷಿ ಹಾಡುಗಳು ಮತ್ತು ಸಂದಿ ಪಾಡ್ದಾನ, ಕಂಗೀಲು ನೃತ್ಯ, ಸುಗ್ಗಿ ಹಾಡುಗಳು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ.ಬಿ. ಇವರ ಪ್ರಕಟಣೆ ತಿಳಿಸಿದೆ.

Comments are closed.