ಕರಾವಳಿ

ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಸಾಕ್ಷ್ಯಾಧಾರದ ಕೊರತೆ : ಮುತಾಲಿಕ್ ಸೇರಿ 26 ಮಂದಿ ಖುಲಾಸೆ

Pinterest LinkedIn Tumblr

ಮಂಗಳೂರು, ಮಾರ್ಚ್.12 : ಮಂಗಳೂರಿನಲ್ಲಿ 2009ರ, ಜನವರಿ 24ರಂದು ನಡೆದ ಪಬ್ ದಾಳಿ ಪ್ರಕರಣದ 26 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ ಖುಲಾಸೆಗೊಳಿಸಲಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಪಬ್ ದಾಳಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂ ಪರ ಸಂಘಟನೆಗಳ ಹಲವು ಮುಖಂಡರನ್ನು ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ಜನವರಿ 24, 2009. ಮಂಗಳೂರಿನ ಜನ ನಿಬಿಡ ಸ್ಥಳವಾದ ಬಲ್ಮಠ ರಸ್ತೆಯಲ್ಲಿರುವ ‘ಅಮ್ನೇಸಿಯಾ – ದಿ ಲಾಂಜೆ’ ಪಬ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿ ಅಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವತಿಯರು ಹಾಗೂ ಯುವಕರ ಮೇಲೆ ಹಲ್ಲೆ ನಡೆಸಿದ್ದರು.

ಪಬ್ ನಲ್ಲಿ ಮೋಜು ಮಸ್ತಿಯಲ್ಲಿದ್ದ ಯುವಕ ಯುವತಿಯರ ಮೇಲೆ ಹಿಗ್ಗಾಮುಗ್ಗಾ ನಡೆದ ಹಲ್ಲೆ ಪ್ರಕರಣ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಪ್ರಮುಖರಾದ ಪ್ರಮೋದ್ ಮುತಾಲಿಕ್ ಸೇರಿ 30 ಮಂದಿ ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ರಾಜ್ಯದಲ್ಲಂತೂ ಈ ನೈತಿಕ ಪೊಲೀಸ್ ಗಿರಿ ಪ್ರಕರಣ ಹಲವು ತಿಂಗಳುಗಳ ಕಾಲ ಬಿಸಿ ಬಿಸಿ ಚರ್ಚೆಯನ್ನೇ ಹುಟ್ಟುಹಾಕಿದ್ದ ಈ ಪ್ರಕರಣಕ್ಕೀಗ ಕೊನೆಗೂ ಇತಿಶ್ರೀ ಹಾಡಲಾಗಿದೆ. ಪ್ರಕರಣದ ಪ್ರಮುಖ 26 ಆರೋಪಿಗಳಿಗೆ ಖುಲಾಸೆ ನೀಡಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಹಲವು ವರ್ಷಗಳ ಕಾಲ ನಡೆದ ಸುದೀರ್ಘ ವಾದ ಪ್ರತಿವಾದ ವಿಚಾರಣೆಗಳ ನಂತರ, ದಕ್ಷಿಣ ಕನ್ನಡ ಜಿಲ್ಲಾ 3ನೇ ಜಿಲ್ಲಾ ಸೆಷನ್ಸ್ ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಾಧೀಶರಾದ ಮಂಜುನಾಥ್ ಸಾಕ್ಷ್ಯಾಧಾರದ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ನ್ಯಾಯವಾದಿ ಆಶಾ ನಾಯಕ್ ಹಾಗೂ ವಿನೋದ್ ಪಾಲ್ ಆರೋಪಿಗಳ ಪರವಾಗಿ ವಾದಿಸಿದರು.

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್, ದಿನಕರ ಶೆಟ್ಟಿ ಸೇರಿ 26 ಮಂದಿ ಆರೋಪಿಗಳನ್ನು ನ್ಯಾಯಾಲಯ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ. ಪ್ರಕರಣದ ಮೂವರು ಆರೋಪಿಗಳು ವಿದೇಶದಲ್ಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು 26 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿತ್ತು.

ತೀರ್ಪು ಸಂತಸ ತಂದಿದೆ – ಇದೊಂದು ಅವಿಸ್ಮರಣೀಯ ದಿನ : ಮುತಾಲಿಕ್

ಇಂದು ತೀರ್ಪು ಪ್ರಕಟಿಸುವ ವೇಳೆ ಮುತಾಲಿಕ್‌ ಅವರು ಕೋರ್ಟ್‌ನಲ್ಲಿ ಹಾಜರಿದ್ದರು. ಪಬ್‌ ಅಟ್ಯಾಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌‌ ನೀಡಿರುವ ತೀರ್ಪು ಸಂತಸ ತಂದಿದೆ. ಇದೊಂದು ಅವಿಸ್ಮರಣೀಯ ದಿನ. ತೀರ್ಪಿನ ಮೂಲಕ ನಮಗೆ ಜಯಸಿಕ್ಕಿದೆ ಎಂದು ಪ್ರಮೋದ್‌ ಮುತಾಲಿಕ್‌ ಅವರು ಈ ವೆಳೆ ಪ್ರತಿಕ್ರಿಯಿಸಿದ್ದಾರೆ

ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿರಲಿಲ್ಲ. ಪ್ರಕರಣ ನಡೆದ ಸಂದರ್ಭ ನಾನು ಮಂಗಳೂರಿನಲ್ಲಿರಲಿಲ್ಲ. ಪುಣೆಯಲ್ಲಿ ನಡೆಯುತ್ತಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಅದರೆ, ಅಲ್ಲಿಂದ ಮರಳಿ ಬರುತ್ತಿರುವಾಗ, ಜನವರಿ 26ರಂದು ಬೆಳಗಾವಿಯಲ್ಲಿ ನನ್ನನ್ನು ಬಂಧಿಸಲಾಗಿತ್ತು. ಒಂಭತ್ತು ವರ್ಷಗಳ ಕಾಲ ವಿಚಾರಣೆಯ ನೆಪದಲ್ಲಿ ನಮಗೆ ಹಿಂಸೆ ನೀಡಲಾಗಿತ್ತು. ಆಗ ಬಿಜೆಪಿ ಸರ್ಕಾರವಿತ್ತು. ನನಗೆ ಕಿರುಕುಳ ನೀಡುವುದಕ್ಕಾಗಿಯೇ ನನ್ನನ್ನು ಬಂಧಿಸಲಾಗಿತ್ತು ಎಂದು ಆರೋಪಿಸಿದರು.

ಕಾರ್ಯಕರ್ತರಿಂದ ಸಂಭ್ರಮಾಚರಣೆ :

ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆ ಶ್ರೀ ರಾಮ ಸೇನೆ ಹಾಗೂ ಇತರ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು  ಪಟಾಕಿ ಸಿಡಿಸಿ ಸಂಭ್ರಮಾ ಆಚರಿಸಿದರು.

Comments are closed.