ಕರಾವಳಿ

ವೆನ್‍ಲಾಕ್‍ನಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

Pinterest LinkedIn Tumblr

ಮಂಗಳೂರು, ಮಾರ್ಚ್.10: ದ.ಕ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಶಾಲಿಟಿ ವೈದ್ಯಕೀಯ ವಿಭಾಗ, ವೆನ್ಲಾಕ್ ಮಕ್ಕಳ ಆರೋಗ್ಯ ಕೇಂದ್ರ, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಮತ್ತು ವೆನ್ಲಾಕ್ ಜಿಲ್ಲಾ ಸಂಯುಕ್ತ ಆಯುಷ್ ಆಸ್ಪತ್ರೆ ಕಟ್ಟಡಗಳಿಗೆ ಶಿಲಾನ್ಯಾಸ ಹಾಗೂ ಎಚ್‌ಎಲ್‌ಎಲ್‌ಎಂಆರ್‌ಐ ವಿಭಾಗದ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಜರುಗಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶಿಲಾನ್ಯಾಸ ಹಾಗೂ ಲೋಕಾರ್ಪಣೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವಂತೆ ಮಂಗಳೂರಿನಲ್ಲಿಯೂ ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಪ್ರಸ್ತುತ ಇರುವ ಆರ್‌ಎಪಿಸಿಸಿ ಆಸ್ಪತ್ರೆ ಮೇಲ್ದರ್ಜೆಗೇರಲಿದೆ. ಇದಕ್ಕಾಗಿ ಈಗಾಗಲೇ 3 ಕೋಟಿರೂ. ಬಿಡುಗಡೆ ಆಗಿದೆ ಎಂದು ಸಚಿವ ರೈ ಹೇಳಿದರು. ಲೇಡಿಗೋಶನ್ನ ನೂತನ ಆಸ್ಪತ್ರೆ ಕೆಲ ದಿನಗಳಲ್ಲೇ ಉದ್ಘಾಟನೆಗೊಂಡು ಮಹಿಳೆಯರ ಆರೋಗ್ಯ ಸೇವೆಗೆ ಲಭ್ಯವಾಗಲಿದೆ ಎಂದರು.

ಒಂದೇ ಸೂರಿನಡಿ ಅಲೋಪತಿ – ಆಯುಷ್ ಚಿಕಿತ್ಸೆ ಲಭ್ಯ:

ವೆನ್ಲಾಕ್ ಆಸ್ಪತ್ರೆಯಲ್ಲಿ 50 ಬೆಡ್ನ ಆಯುಷ್ ಆಸ್ಪತ್ರೆ ನಿರ್ಮಾಣವಾಗುವ ಮೂಲಕ ಒಂದೇ ಸೂರಿನಡಿ ಅಲೋಪತಿ ಹಾಗೂ ಆಯುಷ್ಗೆ ಸಂಬಂಧಿಸಿದ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸಚಿವ ಯು.ಟಿ.ಖಾದರ್ ಹೇಳಿದರು.ಬೆಂಗಳೂರು ನಗರ ಹೊರತುಪಡಿಸಿ 20 ಹಾಸಿಗೆಗಳ ಐಸಿಯು ಹೊಂದಿರುವ ಸರಕಾರಿ ಆಸ್ಪತ್ರೆ ವೆನ್ಲಾಕ್ ಆಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಆಸ್ಪತ್ರೆಯಲ್ಲಿ ಇನ್ನಷ್ಟು ಹೊಸ ಸೌಲಭ್ಯಗಳೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಅವರು ಮಾತನಾಡಿ, ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿರುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಇಲ್ಲಿ ಇನ್ನು ಏನಾದರೂ ಕೊರತೆ ಇದ್ದರೆ ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆ ಮೇಲ್ದರ್ಜೆಗೇರಿಸಲು 2017-18ನೇ ಸಾಲಿನಲ್ಲಿ ಸರಕಾರದಿಂದ ಮಂಜೂರಾದ 10 ಕೋಟಿ ರೂ. ಅನುದಾನದಲ್ಲಿ ಹೆಚ್ಚುವರಿಯಾಗಿ 124 ಹಾಸಿಗೆಗಳ ಸೂಪರ್ ಸ್ಪಶಾಲಿಟಿ ಮೆಡಿಕಲ್ ವಿಭಾಗದ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು. 176 ಹಾಸಿಗೆಗಳ ನೂತನ ಮೆಡಿಸಿನ್ ಬ್ಲಾಕ್ ಕಟ್ಟಡಕ್ಕೆ ಹೊಂದಿಕೊಂಡಂತೆ ಈ ಕಟ್ಟಡ ನಿರ್ಮಾಣಗೊಳ್ಳಲಿದೆ. ನೂತನ ಕಟ್ಟಡಲ್ಲಿ ಕಾರ್ಡಿಯಾಕ್, ಎಂಐಸಿಯು, ಎಂಡೋಸ್ಕೋಪಿ, ಕ್ಯಾಥ್ಲ್ಯಾಬ್ ವಿಭಾಗ ಕಾರ್ಯನಿರ್ವಹಿಸಲಿದೆ. ಆರ್‌ಎಪಿಸಿಸಿ ಆಸ್ಪತ್ರೆಯನ್ನು ಇಂದಿರಾ ಗಾಂಧಿ ನ್ಯಾಶನಲ್ ಚೈಲ್ಡ್ ಇನ್ಸ್ಟಿಟ್ಯೂಟ್ ಆಗಿ ಮೇಲ್ದರ್ಜೆಗೇರಿಸಲಾಗುವುದು. 2.70 ಕೋಟಿ ರೂ. ಅನುದಾನದಲ್ಲಿ 62 ಹಾಸಿಗೆ ಸಾಮರ್ಥ್ಯದ ಕಟ್ಟಡವನ್ನು ಆರ್‌ಎಪಿಸಿಸಿ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.

ವೇದಿಕೆಯಲ್ಲಿ ಮೇಯರ್ ಭಾಸ್ಕರ ಮೊಯ್ಲಿ, ಉಪ ಮೇಯರ್ ಮುಹಮ್ಮದ್ ಕೆ., ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ಫಾರ್ ಮುಲ್ಲರ್ ಹೋಮಿಯೋಪತಿ ವಿಭಾಗದ ಡಾ. ಶಿವಪ್ರಸಾದ್, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಕರ್ನಾಟಕ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಸಂತೋಷ್, ಮನಪಾ ಸದಸ್ಯ ವಿನಯ್ರಾಜ್, ತಾ.ಪಂ. ಸದಸ್ಯ ಅಬ್ದುಲ್ ಜಬ್ಬಾರ್, ಡಾ. ಆಶಾ ಜ್ಯೋತಿ ರೈ, ಕೆಎಂಸಿ ಡೀನ್ ಡಾ. ವೆಂಕಟರಾಯ ಪ್ರಭು, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ. ಸವಿತಾ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ಸ್ವಾಗತಿಸಿದರು.

Comments are closed.