ಕರಾವಳಿ

“ಪ್ರತೀ ಮನಸ್ಸಿನಲ್ಲಿ ಪುಟ್ಟ ಗಾಂಧೀ ಇರಲಿ” : ಡಾ.ಎನ್. ಇಸ್ಮಾಯಿಲ್

Pinterest LinkedIn Tumblr

ಮಂಗಳೂರು ಮಾರ್ಚ್ 9: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧಿಯವರ 150 ನೇ ಜಯಂತಿಯ ಪ್ರಯುಕ್ತ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಮೌಲ್ಯಗಳನ್ನು ಪರಿಚಯಿಸುವ ಧ್ವನಿ ಬೆಳಕಿನ ಸಾಕ್ಷ್ಯಚಿತ್ರ ಚಿತ್ರ ಪ್ರದರ್ಶನವು ನಗರದ ರೊಜಾರಿಯೋ ಶಾಲಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಮಹಾತ್ಮಾ ಗಾಂಧೀ ಶಾಂತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮತ್ತು ಬದ್ರಿಯಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಇಸ್ಮಾಯಿಲ್ ಉದ್ಘಾಟಿಸಿ, ರಾಷ್ಟ್ರಪಿತನ ಆದರ್ಶ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸದಾ ಬೇರೂರಿಬೇಕು. ಪ್ರತಿಯೊಬ್ಬರ ಹೃದಯದಲ್ಲಿ ಒಬ್ಬ ಪುಟ್ಟ ಪಟ್ಟ ಗಾಂಧಿ ನಿರಂತರವಾಗಿ ಮೂಡಿಬರಬೇಕು ಎಂದು ಕರೆ ನೀಡಿದರು.

ಮಹಾತ್ಮಾ ಗಾಂಧೀಜಿಯವರು ಅಗಲಿ ಏಳು ದಶಕಗಳು ಸಂದರೂ ಅವರ ಚಿಂತನೆ ಹಾಗೂ ಬದುಕಿನ ಹಾದಿಗಳು ಇಂದಿಗೂ ಲವಲವಿಕೆಯಿಂದ ಇದ್ದು, ಪ್ರಸ್ತುತ ಸಮಾಜದಲ್ಲಿ ಅದರ ಅಗತ್ಯತೆ ಹೆಚ್ಚು ಅಗತ್ಯವಾಗಿ ಕಂಡುಬರುತ್ತಿದೆ ಎಂದು ಹೇಳಿದರು.

ರೊಸಾರಿಯೋ ಶಿಕ್ಷಣ ಸಂಸ್ಥೆಗಳ ಕರೆಸ್ಪಾಂಡೆಂಟ್ ಫಾದರ್ ಜೆ.ಬಿ.ಕ್ರಾಸ್ತ ಅವರು ಮಾತನಾಡಿ, ಗಾಂಧೀಜಿಯವರು ಸಹಜೀವನ, ಸಹಬಾಳ್ವೆ ಒಳ್ಳೆಯ ಜೀವನ ನಡೆಸಬೇಕು, ಒಳ್ಳೆಯ ನಾಗರೀಕರಾಗಿ ಬಾಳಬೇಕು ಎನ್ನುವ ಆದರ್ಶವನ್ನು ಹಾಗೂ ಸಂದೇಶವನ್ನು ನೀಡಿದ್ದಾರೆ. ಎಲ್ಲರೂ ಶಾಂತಿಯಿಂದ ಸಹಬಾಳ್ವೆಯಿಂದ ಜೀವಿಸಲು ಪ್ರೇರಣೆ ನೀಡಿದ್ದಾರೆ. ನಮ್ಮ ಸಮಾಜದಲ್ಲಿ ರಾಷ್ಟ್ರದಲ್ಲಿ ಸಹೋದರ ಸೌಹಾರ್ದತೆಯಿಂದ ಬಾಳಬೇಕು ಎಂದು ಹೇಳಿದರು.

ಗಾಂಧೀಜಿವರನ್ನು ಮರೆತ ದಿನಗಳಲ್ಲಿ ಗಾಂಧಿಯನ್ನು ನೆನೆಸುವ ದಿನ ಬಂದಿದೆ. ಯಾರನ್ನು ಮರೆತರು ಗಾಂಧಿಯವರನ್ನು ನಾವು ಮರೆಯುವಂತಿಲ್ಲ. ದೇಶಕ್ಕೆ ಭಾರತೀಯ ಸ್ವರೂಪಕೊಟ್ಟವರು, ಸಿದ್ದಾಂತವನ್ನು ಕೊಟ್ಟವರು. ಧರ್ಮವನ್ನು ಶ್ರೇಷ್ಠ ಧರ್ಮ ಎಂದು ಹೇಳುವ ರಾಜಕೀಯ ವ್ಯಕ್ತಿಗಳ ಮುಂದೆ ಮನುಷ್ಯ ಗೌರವ ಶ್ರೇಷ್ಠ ಎಂದು ತೋರಿಸಿ ಕೊಟ್ಟವರು ಎಂದರು.

ಕಾರ್ಯಕ್ರಮದಲ್ಲಿ ರೊಜಾರಿಯೊ ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಜನೇಟ್ ಫೆರ್ನಾಂಡೀಸ್, ಕನ್ನಡ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಭಗಿನಿ ಅಂಟೋನಿ ಮೇರಿ ಉಪಸ್ಥಿತರಿದ್ದರು.  ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು.

Comments are closed.