ಕರಾವಳಿ

ಅನಧಿಕೃತ ಪ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ : ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್

Pinterest LinkedIn Tumblr

( ಸಾಂದರ್ಭಿಕ ಚಿತ್ರ )

ಮಂಗಳೂರು ಮಾರ್ಚ್ 9 : ಮಂಗಳೂರು ಮಹಾನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡುವ ಅಂಗವಾಗಿ ಪಾಲಿಕೆಯು ಅನಧಿಕೃಯತ ಫಲಕ/ಕಟೌಟ್, ಪ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಾಲಿಕೆಯಿಂದ ನಿರಂತರವಾಗಿ ನಡೆಸಲಾಗುತ್ತಿದೆ.

ಸರಕಾರದ ಅಧಿಸೂಚನೆಯಂತೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಪ್ಲೆಕ್ಸ್, ಬ್ಯಾನರ್, ಕಟೌಟ್, ಬಂಟಿಂಗ್ಸ್ ಹಾಗೂ ಪೋಸ್ಟರ್ಸ್‍ಗಳನ್ನು ಅಳವಡಿಸಲು ಅವಕಾಶವಿರುವುದಿಲ್ಲ. ಆದರೆ ಕೆಲವು ಕಾರ್ಯಕ್ರಮ ಸಂಘಟಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಿನೆಮಾ ಪ್ರಚಾರಕರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ವ್ಯಾಪರಕ್ಕೆ ಸಂಬಂಧಿಸಿದ ಕಟೌಟ್, ಬ್ಯಾನರು ಮತ್ತು ಪೋಸ್ಟರ್ಸ್‍ಗಳನ್ನು ಪದೇ ಪದೇ ಪಾಲಿಕೆ ವ್ಯಾಪ್ತಿಯಲ್ಲಿ ಹಾಕುತ್ತಿರುವುದನ್ನು ಗಮನಿಸಲಾಗಿದೆ.

ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯಲ್ಲಿ ಈ ರೀತಿ ಅನಧಿಕೃತ ಪ್ಲೆಕ್ಸ್, ಬ್ಯಾನರ್, ಕಟೌಟ್, ಬಂಟಿಂಗ್ಸ್ ಹಾಗೂ ಪೋಸ್ಟರ್ಸ್‍ಗಳನ್ನು ಹಾಕುತ್ತಿರುವುದು ಕಂಡುಬಂದಲ್ಲಿ ಯಾವುದೇ ವ್ಯಕ್ತಿಗತ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ / ಶಿಕ್ಷಣ ಇತ್ಯಾದಿ ಸಂಸ್ಥೆಗಳು ಹಾಗೂ ಸಂಬಂಧಪಟ್ಟವರ ಮೇಲೆ ಕರ್ನಾಟಕ ತೆರೆದ ಜಾಗ, ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ 1981 ರಂತೆ ನೇರವಾಗಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಸದ್ರಿ ಕಾಯ್ದೆಯ ಪ್ರಕಾರ ತಪ್ಪಿತಸ್ಥರಿಗೆ 6 ತಿಂಗಳ ಜೈಲುವಾಸ ಹಾಗೂ ದಂಡನಾರ್ಹ ಅಪರಾಧವಾಗಿರುತ್ತದೆ. ಈಗಾಗಲೇ ಅನಧಿಕೃತ ಅಳವಡಿಕೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಕಾರ್ಯ ಪ್ರಾರಂಭವಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಇದನ್ನು ಅಂತಿಮ ಎಚ್ಚರಿಕೆ ಎಂದು ಪರಿಗಣಿಸುವಂತೆ ತಿಳಿಸಲಾಗಿದೆ.

ಬಟ್ಟೆ ಬ್ಯಾನರುಗಳಿಗೆ ಮಾತ್ರ ಪಾಲಿಕೆಯಲ್ಲಿ ಅನುಮತಿಯನ್ನು ನೀಡಲಾಗುತ್ತಿದ್ದು ಸದ್ರಿ ಬಟ್ಟೆ ಬ್ಯಾನರುಗಳಿಗೆ ಪಾಲಿಕೆಯಿಂದ ಅನುಮತಿ ಪಡೆದು ಅಳವಡಿಸಿ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.