ಕರಾವಳಿ

ಉಡುಪಿ ಅಬಕಾರಿ ಅಧಿಕಾರಿ ಮನೆ ಹಾಗೂ ಸಂಬಂಧಿಕರ ಮನೆಗೆ ಎಸಿಬಿ ದಾಳಿ : ಏಕಕಾಲದಲ್ಲಿ ಐದು ಕಡೆ ರೈಡ್

Pinterest LinkedIn Tumblr

ಮಂಗಳೂರು, ಮಾರ್ಚ್. 9: ಭ್ರಷ್ಟಾಚಾರ ನಿಗ್ರಹ ದಳ ( Anti-Corruption Bureau)ದ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆಗಳಿಗೆ ಇಂದು ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಉಡುಪಿಯ ಅಬಕಾರಿ ಡಿವೈಎಸ್ಪಿ ವಿನೋದ್ ಕುಮಾರ್ ಅವರ ಮಂಗಳೂರಿನ ಕುಂಟಿಕಾನದಲ್ಲಿರುವ ನಿವಾಸ, ಬೈಂದೂರಿನಲ್ಲಿರುವ ವಿನೋದ ಅವರ ಮಾವನ ಮನೆ ಮತ್ತು ಕಾರ್ಕಳದಲ್ಲಿರುವ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು ಐದು ತಂಡಗಳು ಶುಕ್ರವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿವೆ.

ಎಸಿಬಿ ಅಧಿಕಾರಿಗಳು ಉಡುಪಿ ಅಬಕಾರಿ ಡಿವೈಎಸ್ಪಿ ವಿನೋದ್ ಕುಮಾರ್ ಅವರ ಮಂಗಳೂರಿನ ಕುಂಟಿಕಾನದಲ್ಲಿರುವ ಮನೆಗೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿರುವ ವಿನೋದ್ ಅವರ ಮಾವನ ಮನೆಗೂ ಎಸಿಬಿ ದಾಳಿ ನಡೆಸಿದ್ದು, ಕೆಲವೊಂದು ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ವಿನೋದ್ ಕುಮಾರ್ ವಿರುದ್ಧ ಉಡುಪಿ ಎಸಿಬಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆದಿರುವುದಾಗಿ ಹೇಳಲಾಗಿದ್ದು, ಈ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಉಡುಪಿಯಲ್ಲೂ ದಾಳಿ :

ಅಬಕಾರಿ ಉಪಾಧೀಕ್ಷಕ ಕೆ.ವಿನೋದ್ ಕುಮಾರ್ ಅವರ ಉಡುಪಿ ಕಚೇರಿ ಹಾಗೂ ಚಾಲಕನ ವಸತಿ ಗೃಹದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಪ್ರಭಾರ ಡಿವೈಎಸ್ಪಿ ಬ್ರಿಜೇಶ್ ಮ್ಯಾಥ್ಯೂ ನೇತೃತ್ವದಲ್ಲಿ ಇಂದು ಬೆಳಗ್ಗೆ ಆರು ಗಂಟೆಗೆ ಅಜ್ಜರಕಾಡಿನಲ್ಲಿರುವ ಅಬಕಾರಿ ಕಚೇರಿ ಹಿಂಬದಿ ಯಲ್ಲಿರುವ ವಿನೋದ್ ಕುಮಾರ್ ಅವರ ಕಾರು ಚಾಲಕ ದಿನೇಶ್ ಎಂಬವರ ವಸತಿ ಗೃಹಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ನಂತರ ಅಬಕಾರಿ ಭವನದಲ್ಲಿರುವ ಕಚೇರಿಗೆ ತೆರಳಿದ ತಂಡ ದಾಖಲೆಗಳನ್ನು ಪರಿಶೀಲಿಸಿ ಕೆಲವೊಂದನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಕಚೇರಿಯಲ್ಲಿರುವ ಸಿಬ್ಬಂದಿಗಳು, ಕಂಪ್ಯೂಟರ್ ಆಪರೇಟರ್ಗಳನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ತಂಡದಲ್ಲಿ ಎಸಿಬಿ ನಿರೀಕ್ಷಕ ಕೃಷ್ಣಮೂರ್ತಿ, ಸಿಬ್ಬಂದಿಗಳಾದ ದೇವರಾಜ್, ಮೋಹನ್ ಮುಂತಾದವರಿದ್ದರು.

Comments are closed.