ಅಂತರಾಷ್ಟ್ರೀಯ

14 ತಿಂಗಳ ಮಗುವನ್ನು ಹೆಬ್ಬಾವೊಂದು ಸುತ್ತು ಹಾಕಿಕೊಂಡಿರುವ ಫೋಟೋದ ಹಿಂದೆ ಇದೆ ರೋಚಕ ಸತ್ಯ !

Pinterest LinkedIn Tumblr

ವಾಷಿಂಗ್ಟನ್: ಮಕ್ಕಳ ಬಳಿ ಸಣ್ಣ ಹುಳು ಹುಪ್ಪಟೆ ಅಥವಾ ಜಿರಳೆ ಬಂದ್ರೆನೇ ಪೋಷಕರು ಗಾಬರಿಯಾಗಿ ಮಗುವನ್ನ ಎಳೆದುಕೊಳ್ತಾರೆ. ಆದ್ರೆ 13 ಅಡಿ ಉದ್ದದ ದೈತ್ಯ ಹೆಬ್ಬಾವು 14 ತಿಂಗಳ ಪುಟ್ಟ ಮಗುವನ್ನ ಸುತ್ತುವರೆದಿದ್ರೂ ಮಗುವಿನ ತಂದೆ ಮಾತ್ರ ಆರಾಮಾಗಿ ನೋಡ್ತಾ ಕುಳಿತಿದ್ದರು ಅಂದ್ರೆ ನೀವು ನಂಬಲೇಬೇಕು.

ಅಮೆರಿಕದ ಡೆಟ್ರಾಯ್ಟ್ ನ ವಾಲ್ಡ್ ಲೇಕ್ ಮೂಲದ ಉರಗ ಪ್ರಿಯ ಜೇಮಿ ಗರಿನೋ, ತನ್ನ ಮನೆಯಲ್ಲಿ ಸಾಕಿರೋ 10 ವರ್ಷದ ಹೆಬ್ಬಾವು ಮಗಳು ಅಲಿಸ್ಸಾಗೆ ಏನೂ ಹಾನಿ ಮಾಡಲ್ಲ ಎಂದು ಹೇಳಿದ್ದಾರೆ. ಆದರೂ ವಿಡಿಯೋ ನೋಡಿದವರು ಮಾತ್ರ ಮಗು ಬಗ್ಗೆ ಆತಂಕದಿಂದ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋವನ್ನ 6 ವರ್ಷಗಳ ಹಿಂದೆ ಚಿತ್ರೀಕರಿಸಲಾಗಿದೆಯಾದ್ರೂ ಇಲ್ಲಿನ ಬೀಸ್ಟ್ ಬಡ್ಡಿ ಎಂಬ ಮಾಧ್ಯಮವೊಂದು ಸೋಮವಾರದಂದು ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಬಳಿಕ ಭಾರೀ ಚರ್ಚೆ ಶುರುವಾಗಿದೆ.

ಹಾವುಗಳ ಬಗ್ಗೆ ಜನರಿಗಿರುವ ಅಭಿಪ್ರಾಯಕ್ಕೆ ಸವಾಲು ಹಾಕಲು ಹಾಗೂ ಅವುಗಳನ್ನ ಕಂಡು ಮನುಷ್ಯರು ಭಯಪಡುವುದರಲ್ಲಿ ಅರ್ಥವಿಲ್ಲ ಎಂಬುದನ್ನ ಸಾಬೀತು ಮಾಡಲು ಈ ವಿಡಿಯೋವನ್ನ ಬಿಡುಗಡೆ ಮಾಡಿದ್ದಾಗಿ ಗರಿನೋ ಹೇಳಿದ್ದಾರೆ.

ಹಾವುಗಳು ದುಷ್ಟ ಜೀವಿಗಳಲ್ಲ ಎಂಬ ಸರಳ ಅಂಶವನ್ನ ನಾನು ತೋರಿಸುತ್ತಿದ್ದೆ. ಅವುಗಳ ಮೇಲಿರುವ ಕೆಟ್ಟ ಅಭಿಪ್ರಾಯದ ಹೊರತಾಗಿ ಅವುಗಳು ಒಳ್ಳೇ ಸಾಕುಪ್ರಾಣಿಗಳಾಗಿ ಕೂಡ ಇರಬಹುದು. ನನ್ನ ಮಗಳು ಯಾವುದೇ ರೀತಿಯ ಅಪಾಯದಲ್ಲಿ ಇರಲಿಲ್ಲ ಎಂದು ವಿಡಿಯೋದಲ್ಲಿ ಗರಿನೋ ಹೇಳಿದ್ದಾರೆ. ಹಾವುಗಳ ದಾಳಿಗಳಿಗಿಂತ ಶೇ. 95ರಷ್ಟು ನಾಯಿಗಳ ದಾಳಿಗಳಾಗಿವೆ ಎಂದು ಅವರು ಹೇಳಿದ್ದಾರೆ.

ಜನ ಈ ವಿಡಿಯೋವನ್ನ ನೋಡಿದಾಗ ಭಯದಿಂದಲೇ ಪ್ರತಿಕ್ರಿಯಿಸುತ್ತಾರೆ. ಅದು ಯಾಕೆಂದು ನನಗೆ ಅರ್ಥವೇ ಆಗಲ್ಲ. ಯಾಕಂದ್ರೆ ನೀವು ನೋಡಬಹುದು, ಹಾವು ಸುಮ್ಮನೆ ಸುತ್ತುತ್ತಿದೆ. ಅದಕ್ಕೆ ಮಗುವನ್ನ ಕಚ್ಚುವ, ಉಸಿರುಗಟ್ಟಿಸುವ ಅಥವಾ ನುಂಗುವ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಆದ್ರೆ ಫೇಸ್‍ಬುಕ್‍ನಲ್ಲಿ ವಿಡಿಯೋ ನೋಡಿದವರು ಮಾತ್ರ ಭಯ ಹಾಗೂ ಗಾಬರಿಯಿಂದಲೇ ಕಮೆಂಟ್ ಮಾಡಿದ್ದಾರೆ.

ಗರಿನೋ ಹಾಗೂ ಅವರ ಮತ್ತೊಬ್ಬ ಪುತ್ರಿ ಕ್ರಿಸ್ಟಾ ಸ್ನೇಕ್‍ಹಂಟರ್ಸ್ ಟಿವಿ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ.

Comments are closed.