ಅಂತರಾಷ್ಟ್ರೀಯ

ಕಾರು ಅಪಘಾತವಾಗಿ ಸತ್ತ ಕೋತಿಯ ಹೊಟ್ಟೆಯಲ್ಲಿದ್ದ ಮರಿಕೋತಿಯನ್ನು ಸಿಸೇರಿಯನ್ ಮಾಡಿ ಹೊರತೆಗೆದ ಮಹಿಳೆ

Pinterest LinkedIn Tumblr

ಬ್ಯಾಂಕಾಕ್: ಕಾರು ಅಪಘಾತವಾಗಿ ಕೋತಿಯೊಂದು ಸಾವನ್ನಪ್ಪಿದ್ದು, ಅದರ ಹೊಟ್ಟೆಯಲ್ಲಿ ಇದ್ದ ಮರಿಕೋತಿಯನ್ನು ಮಹಿಳೆಯೊಬ್ಬರು ಸಿಸೇರಿಯನ್ ಮಾಡಿ ಹೊರತೆಗೆದ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದೆ.

ಪದತಾಮ ಕೆದಕುರಿಯಾನನ್(36) ಕೋತಿಮರಿಯನ್ನು ರಕ್ಷಿಸಿದ ಮಹಿಳೆ. ಘಟನೆ ಹೇಗಾಯ್ತು ಎಂದು ವಿವರಿಸಿದ ಅವರು, ನಾಕೌನ್ ಸಾವನ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಗರ್ಭಿಣಿ ಕೋತಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆಗ ನಾನು ಓಡಿಬಂದು ನೋಡಿದ್ದಾಗ ತಾಯಿ ಸಾವನ್ನಪ್ಪಿತ್ತು. ಆ ಕ್ಷಣ ಮರಿಯನ್ನು ಕಾಪಾಡಬೇಕು ಇಲ್ಲವೆಂದರೆ ಮರಿ ಕೂಡ ತನ್ನ ತಾಯಿಯ ಹೊಟ್ಟೆಯಲ್ಲೇ ಸಾವನ್ನಪ್ಪುತ್ತದೆ ಎಂದು ತಿಳಿದು ಮರಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.

ನಾನು ಸಿಸೇರಿಯನ್ ಮಾಡುವಾಗ ಸಂಬಂಧಿಯೊಬ್ಬರು ತನ್ನ ಮೊಬೈಲಿನಲ್ಲಿ ಅದನ್ನು ವಿಡಿಯೋ ಮಾಡುತ್ತಿದ್ದರು. ಕೋತಿಮರಿಯ ತಲೆ ಹೊರಬರುತ್ತಿದ್ದಂತೆ ನಮಗೆ ಖುಷಿಯಾಯಿತ್ತು. ನಾನು ಕೋತಿಯ ಹೊಟ್ಟೆ ಭಾಗ ಮಾಡಿ ಮರಿಯನ್ನು ಹೊರತೆಗೆದೆ. ಆದರೆ ಅದು ಉಸಿರಾಡುತ್ತಿರಲಿಲ್ಲ. ತಕ್ಷಣ ಮರಿಯ ಎದೆ ಮೇಲೆ ಹೊಡೆದೆ ಹಾಗೂ ಅದರ ಬಾಯಿಗೆ ಗಾಳಿಯನ್ನು ಊದಿದೆ ಎಂದು ಪದತಾಮ ಹೇಳಿದ್ದಾರೆ.

ಸದ್ಯ ಆ ಕೋತಿಮರಿ ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲಿಯೇ ಮಲಗುತ್ತದೆ. ಮರಿ ಬೆಳೆದು ದೊಡ್ಡದಾಗುವವರೆಗೂ ನಾನು ಅದನ್ನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಸಿಸೇರಿಯನ್ ಮಾಡಲು ಧೈರ್ಯ ಹೇಗೆ ಬಂತು ಎಂದು ಕೇಳಿದ್ದಕ್ಕೆ, ನನ್ನ ಹೊಟ್ಟೆಯಿಂದ ಮಗುವನ್ನು ವೈದ್ಯರು ಸಿಸೇರಿಯನ್ ಮಾಡಿ ತೆಗೆದಿದ್ದರು. ಈ ವಿಚಾರ ನೆನಪಾಗಿ ನಾನು ಯಾಕೆ ಮಾಡಬಾರದು ಎಂದು ಪ್ರಯತ್ನಿಸಿದೆ. ಅದೃಷ್ಟಕ್ಕೆ ಮರಿ ಕೋತಿ ಜೀವಂತವಾಗಿ ಹೊರ ಬಂತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Comments are closed.