ಕರಾವಳಿ

ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ :ಫಕೀರ್ ಮೊಹಮ್ಮದ್ ಕಟ್ಪಾಡಿ, ಉಮರ್ ಸಹಿತ ಆರು ಮಂದಿಗೆ ಗೌರವ

Pinterest LinkedIn Tumblr

ಮಂಗಳೂರು, ಮಾರ್ಚ್.07 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2016 ಮತ್ತು 2017ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಶಸ್ತಿಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ಹೇಳಿದರು.

2016ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ/ ಸಂಶೋಧನೆ ವಿಭಾಗದಲ್ಲಿ ನಾಡಿನ ಹಿರಿಯ ಸಾಹಿತಿ ಫಕೀರ್ ಮೊಹಮ್ಮದ್ ಕಟ್ಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಜಾನಪದ ಕ್ಷೇತ್ರದಲ್ಲಿ ಮೊಹಮ್ಮದ್ ಮಣ್ಣಗುಂಡಿ ಮತ್ತು ಬ್ಯಾರಿ ಕಲೆ ವಿಭಾಗದಲ್ಲಿ ಅಬೂಬಕ್ಕರ್ ಬಡ್ಡೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.

2017ನೇ ಸಾಲಿನಲ್ಲಿ ಗೌರವ ಪ್ರಶಸ್ತಿಗೆ ಸಾಹಿತ್ಯ/ ಸಂಶೋಧನೆ ವಿಭಾಗದಲ್ಲಿ ಸಾಹಿತಿ, ಪತ್ರಕರ್ತ, ಸಂಘಟಕ ಉಮರ್ ಯು.ಎಚ್. ಅವರನ್ನು ಆಯ್ಕೆ ಮಾಡಲಾಗಿದೆ. ಬ್ಯಾರಿ ಕಲೆ ವಿಭಾಗದಲ್ಲಿ ಅಝೀಝ್ ಬೈಕಂಪಾಡಿ ಮತ್ತು ಜಾನಪದ ವಿಭಾಗದಲ್ಲಿ ಬಿ.ಎಂ.ಹಸೈನಾರ್ ಕಡಂಬು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪ್ರದಾನ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2016 ಮತ್ತು 17ನೇ ಸಾಲಿನ ಎರಡು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.13ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಮೂಡಿಗೆರೆಯ ಎಚ್.ಎಸ್.ಚಂದ್ರೇಗೌಡ ಬಡಾವಣೆಯ ರೈತ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ನಡೆಯಲಿದೆ.

ಸಮಾರಂಭದ ಅಂಗವಾಗಿ ಬೆಳಗ್ಗೆ ಬ್ಯಾರಿ ಕವಿಗೋಷ್ಠಿ ಮತ್ತು ಬ್ಯಾರಿ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ ಎರಡು ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಆಹಾರ ಸಚಿವ ಯು.ಟಿ.ಖಾದರ್ ಮತ್ತು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಸಚಿವ ಆರ್.ರೋಶನ್ ಬೇಗ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಕರಂಬಾರು ಮೊಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಮೋಟಮ್ಮ, ಬಿ.ಬಿ. ನಿಂಗಯ್ಯ, ಎಂ.ಕೆ.ಪ್ರಾಣೇಶ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಪ್ರಶಸ್ತಿ ಪುರಸ್ಕೃತರು :

ಫಕೀರ್ ಮುಹಮ್ಮದ್ ಕಟ್ಪಾಡಿ: ಫಕೀರ್ ಮುಹಮ್ಮದ್ ಕಟ್ಪಾಡಿ ಉಡುಪಿ ಜಿಲ್ಲೆಯ ಬಾರ್ಕೂರಿನವರು. ಆರು ಕಥಾ ಸಂಕಲನಗಳು, ಎರಡು ಕಾದಂಬರಿಗಳು ಹಾಗೂ ಏಳು ಇತರ ಕೃತಿಗಳು, ಐದು ಅನುವಾದ ಕೃತಿಗಳು ಪ್ರಕಟವಾಗಿವೆ. ಬಂಡಾಯ ಸಾಹಿತ್ಯ ಸಂಘಟನೆ, ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸದಸ್ಯರಾಗಿ ಕೆಲಸ ಮಾಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಕಾರಿಗಳ ಸಂಘಟನೆಯ ಮಂಗಳೂರು ವಲಯ ಕಾರ್ಯದರ್ಶಿಯಾಗಿದ್ದರು.

ಉಮರ್ ಯು.ಎಚ್.: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ, ಬ್ಯಾರೀಸ್ ವೆಲೇರ್ ಅಸೋಸಿಯೇಶನ್ನ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ನಲ್ಲಿ ಸುಮಾರು 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಮಂಗಳೂರು, ಬಂಟ್ವಾಳ, ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನಗಳ ಯಶಸ್ಸಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಮುಹಮ್ಮದ್ ಮಣ್ಣಗುಂಡಿ: ಅವಿಭಜಿತ ದಕ್ಷಿಣ ಕನ್ನಡ ಜಿಯ ಕಂಬಳದ ಕೋಣಗಳ ಓಟಗಾರ. ತನ್ನ ೧೮ನೇ ವಯಸ್ಸಿನಲ್ಲೇ ಕಂಬಳದ ಕೋಣಗಳ ಓಡಿಸುವ ಕಾಯಕಕ್ಕೆ ಇಳಿದಿದ್ದಾರೆ. ನೇಗಿಲು ಹಿರಿಯ, ಹಗ್ಗ ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ ಸೇರಿದಂತೆ ಎಲ್ಲ ಪ್ರಕಾರದಲ್ಲೂ ಕೋಣಗಳನ್ನು ಓಡಿಸಿ ದಾಖಲೆಯ ಪ್ರಶಸ್ತಿಗಳನ್ನು ಬಾಚಿದ ವ್ಯಕ್ತಿ.

ಅಬೂಬಕ್ಕರ್ ಬಡ್ಡೂರು: ಮೇರಮಜಲು ಗ್ರಾಮದ ಬಡ್ಡೂರಿನ ಅಬೂಬಕ್ಕರ್ ಬಡ್ಡೂರು, ತನ್ನ ೧೮ನೇಯ ವಯಸ್ಸಿನಲ್ಲಿ ನಾಟಕದಲ್ಲಿ ಅಭಿನಯಿಸಲು ತೊಡಗಿ, ೩೦೦ಕ್ಕಿಂತ ಹೆಚ್ಚು ನಾಟಕಗಳು, ಹಲವಾರು ಟೆಲಿಫಿಲಂಗಳು ಹಾಗೂ ನಾಲ್ಕು ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬ್ಯಾರಿ, ತುಳು, ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆರು ನಾಟಕಗಳನ್ನು ಸ್ವತಃ ಬರೆದು ಅಭಿನಯಿಸಿ ನಿರ್ದೇಶಿಸಿದ್ದಾರೆ. 2014ರಲ್ಲಿ ಮುಡಿಪುವಿನಲ್ಲಿ ನಡೆದ ಅಬ್ಬಕ್ಕ ಉತ್ಸವದಲ್ಲಿ ತೆಲಿಕೆದ ಪಂಥದಲ್ಲಿ ರ್ಸ್ಪಸಿ ಪ್ರಥಮ ಬಹುಮಾನ ಗೆದ್ದಿದ್ದಾರೆ.

ಬಿ.ಎಂ.ಹಸೈನಾರ್: ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಬೆದ್ರಕಾಡುವಿನ ಬಿ.ಎಂ.ಹಸೈನಾರ್, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ನಾನಾ ಪ್ರದೇಶಗಳಲ್ಲಿ ಕಳೆದ ೩೫ ವರ್ಷಗಳಿಂದ ದಪ್ಪು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಿಫಾಯಿ ದಪ್ಪು ರಾತೀಬುಗಳ ವಿದ್ಯೆಗಳನ್ನು ಕಲಿಸಿಕೊಟ್ಟು ಸಾವಿರಾರು ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಹೊಂದಿರುತ್ತಾರೆ. ಈಗಲೂ ಸದ್ರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಅಬ್ದುಲ್ ಅಜೀಜ್ ಬೈಕಂಪಾಡಿ: 14ನೇ ವಯಸ್ಸಿನಿಂದಲೇ ತುಳು ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ತೊಡಗಿದ್ದಾರೆ. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ನಲ್ಲಿ 3 ವರ್ಷ ಪ್ರಧಾನ ಕಾರ್ಯದರ್ಶಿ, ಬ್ಯಾರಿ ಕಲಾ ರಂಗ ಇದರ ಸ್ಥಾಪಕ ಅಧ್ಯಕ್ಷ, ಅಖಿಲ ಭಾರತ ಬ್ಯಾರಿ ಪರಿಷತ್ನ ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ.

Comments are closed.