ಕರಾವಳಿ

ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಕಾರ್ಣಿಕ್ ಆಗ್ರಹ

Pinterest LinkedIn Tumblr

ಕ್ಯಾ. ಗಣೇಶ್ ಕಾರ್ಣಿಕ್         –        ಜಸ್ಟೀಸ್ ವಿಶ್ವನಾಥ ಶೆಟ್ಟಿ        –        ಗೃಹ ಸಚಿವ ರಾಮಲಿಂಗ ರೆಡ್ಡಿ

ಮಂಗಳೂರು : ಕರ್ನಾಟಕ ಲೋಕಾಯುಕ್ತರಾದ ಜಸ್ಟೀಸ್ ವಿಶ್ವನಾಥ ಶೆಟ್ಟಿಯವರನ್ನು ಚಾಕುವಿನಿಂದ ಇರಿಯುವ ಮೂಲಕ ಕೊಲೆ ನಡೆಸಲು ಯತ್ನಿಸಿದ ಘಟನೆಯನ್ನು ತಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್‌ನೆ ವಿರೋಧ ಪಕ್ಷದ ಸಚೇತಕ ಕಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಜನತೆಗೆ ನ್ಯಾಯ ಒದಗಿಸಬೇಕಾದ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದ ರಾಜ್ಯ ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರ ಮೇಲೆ ಅವರ ಕಚೇರಿಯಲ್ಲಿ ಅವರ ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರೂ ಚಾಕುವಿನಿಂದ ಇರಿದ ಘಟನೆ ನಾಡಿನ ಜನತೆಯನ್ನು ದಿಗ್ಭ್ರಮೆಗೊಳಿಸಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿದ್ಧರಾಮಯ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಗೃಹ ಮಂತ್ರಿಗಳು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಬೇಜವಬ್ದಾರಿ ಹೇಳಿಕೆಗಳಾದ ಕೇವಲ ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ್ದು ಮಾತ್ರ ಹಾಗೂ ಗೌರಿ ಲಂಕೇಶ್ ರವರ ಹಂತಕರ ಸುಳಿವು ಸಿಕ್ಕಿದೆ ಮುಂತಾದ ಹೇಳಿಕೆಗಳು ಹಾಗೂ ಗಂಭೀರ ಆರೋಪಗಳನ್ನು ಹೊಂದಿರುವ ತಪ್ಪಿತಸ್ಥರ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಅಪ್ರಬುದ್ಧ ನಿರ್ಣಯ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರ ನೀಡಿದ ಪ್ರೋತ್ಸಾಹವೇ ಇಂದಿನ ಘಟನೆಗೆ ಕಾರಣ.

ಈ ಘಟನೆಯ ನೈತಿಕ ಜವಾಬ್ದಾರಿಯನ್ನು ಹೊತ್ತು ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸುವುದಾಗಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಕಾಪ್ಟನ್ ಗಣೇಶ್ ಕಾರ್ಣಿಕ್ ಅವರು, ನ್ಯಾಯಮೂರ್ತಿ ಶ್ರೀ ವಿಶ್ವನಾಥ ಶೆಟ್ಟಿಯವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.

Comments are closed.