ಕರಾವಳಿ

ಮಂಗಳೂರಿನ ನಾಲ್ಕು ಕಡೆಗಳಲ್ಲಿ ‘ಇಂದಿರಾ ಕ್ಯಾಂಟೀನ್’ ಆರಂಭ

Pinterest LinkedIn Tumblr

ಮಂಗಳೂರು, ಮಾರ್ಚ್.6: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಮಂಗಳವಾರದಿಂದ ಆರಂಭಗೊಂಡಿದೆ.

ಮಂಗಳೂರಿನ ಕೇಂದ್ರ ಮೈದಾನ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ, ಎಂ ಎಲ್ ಸಿ ಐವನ್ ಡಿಸೋಜ, ದ.ಕ. ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಸಚೇತಕ ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಮೈದಾನ ಬಳಿಯ ಇಂದಿರಾ ಕ್ಯಾಂಟೀನ್‌ ಸೇರಿದಂತೆ ನಗರದ ಉರ್ವಸ್ಟೋರ್, ಕಾವೂರು, ಸುರತ್ಕಲ್‌ಗಳಲ್ಲಿನ ಇಂದಿರಾ ಕ್ಯಾಂಟೀನ್ ಮಂಗಳವಾರದಿಂದ ಆರಂಭಗೊಂಡಿದೆ. ಪಂಪ್‌ವೆಲ್ ನಲ್ಲಿಯೂ ಇಂದಿರಾ ಕ್ಯಾಂಟೀನ್‌ ನಿರ್ಮಾಣಗೊಳ್ಳಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ದಿನಂಪ್ರತಿ 500 ಮಂದಿಗೆ ಊಟ, ತಿಂಡಿ ವಿತರಣೆ ನಡೆಯಲಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ತಿಂಡಿ-ಊಟ ಬೇಕಾದವರು ಕೂಪನ್ ಪಡೆಯಬೇಕು. ಕೇಸರಿ ಬಾತ್, ಖಾರಾ ಬಾತ್, ಇಡ್ಲಿ ಉಪಹಾರದಲ್ಲಿ ಸೇರಿವೆ. ಉಪಹಾರಕ್ಕೆ 5 ರೂ, ಊಟ ತಲಾ 10 ರೂ. ಇಂದಿರಾ ಕ್ಯಾಂಟೀನ್‌ಗೆ ಆಹಾರವನ್ನು ಉರ್ವಸ್ಟೋರ್‌ನ ಪ್ರಧಾನ ಅಡುಗೆ ಕೇಂದ್ರದಿಂದ ಪೂರೈಸಲಾಗುತ್ತದೆ. ಪಾಲಿಕೆ ವತಿಯಿಂದ ಇದಕ್ಕೆ ವಾರ್ಷಿಕ 2.25 ಕೋಟಿ ಮೊತ್ತವನ್ನು ಬಜೆಟ್‌ನಲ್ಲಿ ಕಾದಿರಿಸಲಾಗಿದೆ .ಸದ್ಯಕ್ಕೆ ಮಂಗಳೂರಿನ 4 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಸಾರ್ವಜನಿಕರಿಗೆ ಲಭ್ಯವಾಗಲಿದೆ.

Comments are closed.