ಕರಾವಳಿ

ರೈಲ್ವೆ ಇಲಾಖೆಯಿಂದ ಸಿಎಪಿಎಫ್ ಜವಾನರಿಗಾಗಿ ಅಳವಡಿಸಲಾದ ವಿಶೇಷ ಭೋಗಿಗೆ ಮಂಗಳೂರಿನಲ್ಲಿ ಚಾಲನೆ

Pinterest LinkedIn Tumblr

ಮಂಗಳೂರು, ಮಾರ್ಚ್. 6: ರೈಲ್ವೆ ಇಲಾಖೆವು ಸಿಎಪಿಎಫ್ ಜವಾನರಿಗಾಗಿ ವಿಶೇಷ ಭೋಗಿಯ ಅಳವಡಿಕೆಗೆ ಅನುವು ಮಾಡಿ ಕೊಟ್ಟಿರುವುದರಿಂದ ಅನುಕೂಲವಾಗಿದೆ ಎಂದು ಚೆನ್ನೈ ಸಿಐಎಸ್‌ಎಫ್ನ ಉಪ ಮಹಾ ಅಧೀಕ್ಷಕ ಹರ್ದೀಪ್ ಸಿಂಗ್ ಹೇಳಿದರು.

ಮಂಗಳೂರಿನಿಂದ ಜಮ್ಮು ತಾವಿಗೆ ಹೊರಡುವ ಪ್ರಯಾಣಿಕರ ರೈಲಿನಲ್ಲಿ ಸಿಎಪಿಎಫ್ ಜವಾನರಿಗಾಗಿ ಅಳವಡಿಸಲಾದ ವಿಶೇಷ ಭೋಗಿಗೆ ಅವರು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಈ ರೈಲು ಮಂಗಳೂರಿನಿಂದ ಜಮ್ಮು ತಾವಿಗೆ ವಾರಕ್ಕೊಮ್ಮೆ ಪ್ರಯಾಣಿಸಲಿದೆ. ಈಗಾಗಲೇ ಇಂತಹ ವಿಶೇಷ ಭೋಗಿಯನ್ನು ಹೊಂದಿರುವ ರೈಲಿಗೆ ಮಾ. 1ರಂದು ಚೆನ್ನೈಯಿಂದ ಚಾಲನೆ ನೀಡಿದ್ದು, ಅದು ವಾರಕ್ಕೆ ಮೂರು ಬಾರಿ ಚೆನ್ನೈಯಿಂದ ಜಮ್ಮು ತಾವಿಗೆ ಪ್ರಯಾಣಿಸಲಿದೆ ಎಂದರು.

ಕರ್ತವ್ಯದಲ್ಲಿರುವ ಸಂದರ್ಭ ಮಾತ್ರ ಸಿಎಪಿಎಫ್ ಜವಾನರು ಈ ವಿಶೇಷ ಭೋಗಿಯ ಸೌಲಭ್ಯವನ್ನು ಪಡೆಯಬಹುದು. ಸಿಎಪಿಎಫ್ ಜವಾನರಿಗಾಗಿ ಮೀಸಲಾಗಿರುವ ಈ ಬೋಗಿಯಲ್ಲಿ ಅವರ ಕುಟುಂಬ ಸದಸ್ಯರಿಗೂ ಪ್ರಯಾಣಿಸಲು ಅವಕಾಶ ಇದೆ. ಈ ವಿಶೇಷ ಭೋಗಿಯ ಉಸ್ತುವಾರಿಗೆ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಹರ್ದೀಪ್ ಸಿಂಗ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಏರಿಯಾ ಅಧಿಕಾರಿ ನಿತಿನ್ ನೋರ್ಬರ್ಟ್ ಮತ್ತಿತರರು ಉಪಸ್ಥಿತರಿದ್ದರು.

Comments are closed.