ಕರಾವಳಿ

ಈ ಕಾಯಿಲೆಯ ಬಗ್ಗೆ ಕೆಲವೊಂದು ಮಾಹಿತಿ ಮತ್ತು ಸಲಹೆಗಳು

Pinterest LinkedIn Tumblr

ಮಂಗಳೂರು:ಬೇಸಿಗೆಯ ದಿನಗಳಲ್ಲಿ ಶುದ್ದೀಕರಣಗೊಳ್ಳದ ಮತ್ತು ಕುದಿಸಿ ಆರಿಸದ ನೀರನ್ನು ಕುಡಿಯುವುದರಿಂದ ಸಾಂಕ್ರಾಮಿಕ ರೋಗಗಳು ಬಹುಬೇಗ ಹರಡುತ್ತಿದ್ದು, ಜನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸುವುದು, ಅಶುದ್ಧ ನೀರು ಕುಡಿಯುವುದು, ಸ್ಥಳೀಯವಾಗಿ ಮಾರಾಟ ಮಾಡುವ ಗುಣಮಟ್ಟವಿಲ್ಲದ ಐಸ್ ಕ್ಯಾಂಡಿಗಳನ್ನು ತಿನ್ನುವುದರಿಂದಲೂ ಕೆಲವು ರೋಗಗಳು ಹರಡುತ್ತಿರುವುದು ಕಂಡು ಬರುತ್ತಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇವು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ನೀರು, ಆಹಾರ ಪದಾರ್ಥಗಳನ್ನು ಶುಚಿಯಾಗಿದ್ದಲ್ಲಿ ಮಾತ್ರ ಸೇವಿಸಬೇಕು. ಎಲ್ಲೆಂದರಲ್ಲಿ ಆಹಾರ ಸೇವಿಸುವುದು, ನೀರು ಕುಡಿಯುವುದು ಅಪಾಯವಾಗಿದೆ.

ಇತ್ತೀಚೆಗೆ ಕೊಡಗಿನ ನಾಪೋಕ್ಲು ಪಟ್ಟಣದಲ್ಲಿ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿತ್ತು. ಇದು ಒಬ್ಬರಿಂದ ಒಬ್ಬರಿಗೆ ಹರಡಲು ಸ್ಥಳೀಯವಾಗಿ ಮಾರುವ ಐಸ್ ಕ್ಯಾಂಡಿ ಕಾರಣವಾಗಿತ್ತು. ಜಾಂಡೀಸ್ ರೋಗ ಇತ್ತೀಚೆಗೆ ಅಲ್ಲಲ್ಲಿ ಕಂಡು ಬರುತ್ತಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಜಾಂಡೀಸ್ ಕಾಯಿಲೆ ಕುರಿತಂತೆ ಕೆಲವೊಂದು ಸಲಹೆ ಮತ್ತು ಮಾಹಿತಿ ನೀಡಿರುವ ವೈದ್ಯರು ಜಾಂಡೀಸ್ ರೋಗವು ಹೆಪಾಟೈಟಿಸ್ `ಎ’ ಎಂಬ `ಪಿ’ ಪಿಕಾನರ್ ವೈರಸ್ನಿಂದ ಹರಡುತ್ತಿದ್ದು, ಈ ರೋಗದ ಕುರಿತು ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

ಜಾಂಡೀಸ್ಗೆ ಕಾರಣವಾದ ವೈರಸ್ ಲಿವರ್ಗೆ ತಲುಪಿ ಅಲ್ಲಿ ವೃದ್ಧಿಯಾಗಿ ರೋಗ ಲಕ್ಷಣಗಳು ಹೊರ ಹೊಮ್ಮಲು ಸರಾಸರಿ 30 ದಿವಸಗಳು ಬೇಕಾಗುತ್ತದೆ. ಹೀಗಾಗಿ ತಕ್ಷಣಕ್ಕೆ ಗೊತ್ತಾಗದಿದ್ದರೂ ಈ ರೋಗ ಉಲ್ಭಣಗೊಳ್ಳುತ್ತಿದ್ದಂತೆಯೇ ಅದರ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ದೊಡ್ಡವರಲ್ಲಿ ಹೆಚ್ಚಾಗಿರುತ್ತದೆ. ಹೆಪಾಟೈಟಿಸ್ `ಎ’ ಯ ರೋಗ ಲಕ್ಷಣಗಳು 3 ವಾರದವರೆಗೂ ಇದ್ದು, ಸಮಾರು 9 ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಕೆಲವರಲ್ಲಿ ವಾಸಿಯಾಗಲು 3 ತಿಂಗಳು ಬೇಕಾಗುತ್ತದೆ.

ರೋಗ ಲಕ್ಷಣಗಳು ಕಂಡುಬರುವ 2 ವಾರಗಳವರೆಗೆ ಈ ರೋಗಾಣು ಮಲದಲ್ಲಿ ವಿಸರ್ಜನೆಯಾಗುತ್ತಿರುತ್ತದೆ. 3 ವಾರಗಳಲ್ಲಿ ಈ ವೈರಸ್ ತಾವಾಗಿಯೇ ಸ್ವಯಂ ನಿರ್ನಾಮಗೊಂಡು, ರೋಗಿ ತಾನಾಗಿಯೇ ಗುಣಮುಖವಾಗುತ್ತಾನೆ ಇದನ್ನು ವೈದ್ಯಕೀಯ ವಲಯದಲ್ಲಿ “ಸೆಲ್ಫ್ ಲಿಮಿಟಿಂಗ್” ಎನ್ನುತ್ತಾರೆ. ಮುಖ್ಯವಾಗಿ ಹೊಟ್ಟೆ ಹಸಿವು ಕಡಿಮೆಯಾಗುವುದು, ಬಲಗಡೆ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬರುವುದು, ಆಗಾಗ ವಾಂತಿಯಾಗುವದು ಮತ್ತು ವಿಪರೀತ ಸುಸ್ತು ಸಂಕಟವಾಗುವದು ರೋಗದ ಲಕ್ಷಣಗಳಾಗಿವೆ. ನಾಟಿ ಔಷಧಿ, ಅಲೋಪತಿ ಔಷಧಿ, ಯಾವುದೇ ಚಿಕಿತ್ಸೆ ಮಾಡಿದರೂ ದಿನಕ್ಕೆ 3 ಗ್ಲಾಸ್ ನಿಂಬೆ ಹಣ್ಣು, ಕಿತ್ತಳೆ, ಮೂಸಂಬಿ ಅಥವಾ ಕಬ್ಬಿನ ರಸವನ್ನು ಮತ್ತು 3 ಚಮಚ ಗ್ಲೂಕೋಸ್ ಹಾಕಿ ಕರಗಿಸಿ ಕುಡಿದರೆ ಈ ರೋಗ ಬೇಗ ಗುಣಮುಖವಾಗುತ್ತದೆ.

ಕಾಯಿಲೆ ಬಂದ ಬಳಿಕ ಪರದಾಡುವುದಕ್ಕಿಂತಲೂ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಅಗತ್ಯ ಹೀಗಾಗಿ ಕೆಲವೊಂದು ಕ್ರಮಗಳನ್ನು ಅಳವಡಿಸುವುದರ ಮೂಲಕ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದೇನೆಂದರೆ ಮಲವಿಸರ್ಜನೆ ಮಾಡಿದ ನಂತರ ಚೆನ್ನಾಗಿ ಸೋಪಿನಿಂದ ಕೈ ತೊಳೆದುಕೊಳ್ಳಬೇಕು. ಕುಡಿಯುವ ನೀರನ್ನು ಕಡೇ ಪಕ್ಷ 5 ನಿಮಿಷಗಳಾದರೂ ಕುದಿಸಿ ಬಳಿಕ ಕುಡಿಯಬೇಕು. ರಸ್ತೆಯ ಬದಿಯಲ್ಲಿ ಮಾಡುವ ತಿಂಡಿ-ತಿನಿಸು, ಹಣ್ಣು-ಹಂಪಲುಗಳನ್ನು ತಿನ್ನಬಾರದು. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೀಗೆ ಮಾಡುವುದರಿಂದ ರೋಗ ಬರದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ

Comments are closed.