ಮಂಗಳೂರು ಮಾರ್ಚ್ 6 : ಮಹಿಳೆಯರು ದಿನ ಪೂರ್ತಿ ಕೆಲಸ ಮಾಡುತ್ತಾರೆ, ಅದರಲ್ಲೂ ಸ್ವಲ್ಪ ಸಮಯವನ್ನು ಕ್ರೀಡೆಗೆ ಮೀಸಲಿಟ್ಟರೆ ಉತ್ತಮ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ ಹೇಳಿದರು.
ಅವರು ದ.ಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟದಲ್ಲಿ ಮಾತನಾಡಿ, ಬಿಸಿಲನ್ನು ಲೆಕ್ಕಿಸದೆ ಕ್ರೀಡೆಯಲ್ಲಿ ಭಾಗವಹಿಸಿದಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚುತ್ತದೆ. ಕ್ರೀಡೆಯಲ್ಲಿ ಭಾಗಿಯಾದವರಿಗೆ ಅದರ ನಿಜವಾದ ಆನಂದ ಸಿಗುತ್ತ್ತದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಂದರ್ ಪೂಜಾರಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ತಾಲೂಕು ಮಟ್ಟದಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗುತ್ತಿದ್ದು, ಆದರೆ ಈ ಭಾರಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಚುನಾವಣೆಯ ಕುರಿತು ಜಾಗೃತಿ ಜಾಥವು ನಡೆಯಿತು. ಜಾಥಕ್ಕೆ ದ.ಕ ಜಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾರ್ಹಣಾ ಧಿಕಾರಿ ಎಮ್.ಆರ್ ರವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಉಸ್ಮಾನ್, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲ ಸಿ.ಕೆ, ಸುಳ್ಯ ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಸರಸ್ವತಿ, ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜಾನಾಧಿಕಾರಿ, ತಾಲೂಕು ಕ್ರೀಡಾ ಅಧಿಕಾರಿ ಲಿಲ್ಲಿ ಪಾಯಸ್, ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಪ್ರಿಯಾ ಆಗ್ನೇಸ್ ಮತ್ತು ಬೆಳ್ತಂಗಡಿ ಸ್ತ್ರೀ ಶಕ್ತಿ ಗೌರವ ಅಧ್ಯಕ್ಷೆ ಲೋಕೇಶ್ವರಿ ಉಪಸ್ಥಿತರಿದ್ದರು.