ಕರಾವಳಿ

ಚುನಾವಣೆಗೆ ಸಿದ್ಧತೆ – ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಇನ್ನೂ ಅವಕಾಶ : ಅಪರ ಜಿಲ್ಲಾಧಿಕಾರಿ

Pinterest LinkedIn Tumblr

ಜಿಲ್ಲೆಯಲ್ಲಿ 8,20,764 ಪುರುಷ, 8,46,050 ಮಹಿಳಾ ಮತದಾರರು

ಮಂಗಳೂರು, ಮಾರ್ಚ್.4: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ ದ.ಕ. ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಇನ್ನೂ ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು.

ಚುನಾವಣೆಗಿಂತ ಒಂದು ವಾರದ ಮೊದಲಿನವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶವಿದೆ. ಆದರೆ ಪಟ್ಟಿಯಿಂದ ಹೆಸರು ತೆಗೆಸಲು ಚುನಾವಣೆ ಘೋಷಣೆಯವರೆಗೆ ಮಾತ್ರ ಅವಕಾಶ ಎಂದವರು ಮಾಹಿತಿ ನೀಡಿದರು.

ದ.ಕ. ಜಿಲ್ಲೆಯಲ್ಲಿ ಈವರೆಗೆ 22,513 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಸದ್ಯ 8,20,764 ಪುರುಷ ಹಾಗೂ 8,46,050 ಮಹಿಳೆಯರು ಸೇರಿ ಒಟ್ಟು 16,66,814 ಮತದಾರರಿದ್ದಾರೆ. ಈ ಪೈಕಿ 16,24,137 ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ 9,280 ವಿಕಲಚೇತನ ಮತದಾರರಿದ್ದಾರೆ. ಇನ್ನೂ 262 ಮತದಾರರು ಸೇರ್ಪಡೆಗೆ ಬಾಕಿಯಿವೆ. ಅವರನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇವರು ಹಕ್ಕು ಚಲಾಯಿಸಲು ಅನುಕೂಲಕರ ವ್ಯವಸ್ಥೆ ಕಲ್ಪಿಸಲಾಗುವುದು. ಇವರಿಗೆ ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ಮಾಹಿತಿ ಕೇಂದ್ರ ಹಾಗೂ ನೆರವಾಗಲು ಸಹಾಯಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 1,790 ಮತಗಟ್ಟೆಗಳಿವೆ. ಇವೆಲ್ಲವೂ ಸರಕಾರಿ ಕಟ್ಟಡಗಳಲ್ಲೇ ಕಾರ್ಯಾಚರಿಸುತ್ತಿವೆ. ಈ ಪೈಕಿ ಕಟ್ಟಡ ಶಿಥಿಲಗೊಂಡಿರುವ, ನೀರಿನ ಸೌಲಭ್ಯ ಇತ್ಯಾದಿ ಸೌಕರ್ಯಗಳಲ್ಲಿ ಕೊರತೆ ಇರುವ 37 ಮತಗಟ್ಟೆಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.

ಮಾಹಿತಿ ಕೇಂದ್ರ, ಪ್ರತ್ಯೇಕ ವೆಬ್ಸೈಟ್ ಕಾರ್ಯಾರಂಭ :ಚುನಾವಣಾ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ ಜಿಲ್ಲಾಡಳಿತ ಕೇಂದ್ರದಲ್ಲಿ ಪ್ರತ್ಯೇಕ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಇಲ್ಲಿ 24×7 ಟೋಲ್ ಫ್ರೀ ವ್ಯವಸ್ಥೆ, ಇಬ್ಬರು ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಜಿಲ್ಲಾಡಳಿತದಿಂದ www.deodk.com ಎಂಬ ಪ್ರತ್ಯೇಕ ವೆಬ್ಸೈಟ್ ಅನ್ನು ತೆರೆಯಲಾಗಿದೆ ಎಂದು ಕುಮಾರ್ ಮಾಹಿತಿ ನೀಡಿದರು.

ಇವಿಎಂ ಮತಯಂತ್ರಗಳ ಪರಿಶೀಲನೆಗೆ ದಿಲ್ಲಿಯಿಂದ ತಜ್ಞರು ಆಗಮಿಸಿದ್ದು, ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

Comments are closed.