ಕ್ರೀಡೆ

ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿ ಪಡೆದ ವೇಗಿ ಬೌಲರ್ ನಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯ!

Pinterest LinkedIn Tumblr

ಮೆಲ್ಬೋರ್ನ್: ಆಸಿಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿ ಪಡೆದ ವೇಗಿ ಸೀನ್ ಅಬಾಟ್ ರಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯವಾಗಿದೆ..

2014ರ ನವೆಂಬರ್‌ನಲ್ಲಿ ನಡೆದಿದ್ದ ಫಿಲಿಪ್ ಹ್ಯೂಸ್ ಸಾವಿನ ಪ್ರಕರಣವನ್ನುನೆನಪಿಸುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಂದು ಫಿಲಿಪ್ ಹ್ಯೂಸ್ ಬಲಿ ಪಡೆದ ಆಸೀಸ್ ನ ಅದೇ ಬೌಲರ್ ನಿಂದ ಇದೀಗ ಮತ್ತೋರ್ವ ಬ್ಯಾಟ್ಸಮನ್ ತಲೆಗೆ ಬೌನ್ಸರ್ ಬಂದು ತಗುಲಿದೆ.

ಭಾನುವಾರ ನಡೆದ ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಸೀನ್ ಅಬಾಟ್ ಎಸೆದ ಬೌನ್ಸರ್ ಎಸೆತವೊಂದು ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಹೆಲ್ಮೆಟ್‌ಗೆ ಬಲವಾಗಿ ಅಪ್ಪಳಿಸಿತು. ಇದರಿಂದ ನೆಲಕ್ಕುರುಳಿದ ವಿಲ್ ಗಾಯಗೊಂಡು ನಿವೃತ್ತಿಯಾದರು. ಚೆಂಡು ಬಡಿದ ಬಳಿಕ ಮೈದಾನದಲ್ಲೇ ಚಿಕಿತ್ಸೆ ಪಡೆದ ವಿಲ್ ಕೆಲವು ನಿಮಿಷದ ಬಳಿಕ ಚೇತರಿಸಿಕೊಂಡರು. ಬಳಿಕ ವೈದ್ಯರು ಹಾಗೂ ಫಿಸಿಯೋ ತಜ್ಞರ ನೆರವಿನಿಂದ ಮೈದಾನದಿಂದ ಹೊರ ನಡೆದಿದ್ದರು. ಆದರೆ, ವಿಲ್ ಸರಿಯಾಗಿ ನಿಲ್ಲಲು ಪರದಾಡುತ್ತಿರುವಂತೆ ಕಂಡುಬಂದರು.

ಇದೀಗ ಅಬಾಟ್ ಬೌಲಿಂಗ್‌ಗೆ ಗಾಯಗೊಂಡಿರುವ 20ರ ಹರೆಯದ ಪುಕೊಸ್ಕಿ ಹಲವು ಬಾರಿ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದಾರೆ. ಕಳೆದ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದರು. ಮೂರು ತಿಂಗಳ ಬಳಿಕ ಚೇತರಿಸಿಕೊಂಡಿದ್ದರು.

ಇಂತಹುದೇ ಘಟನೆ 2014ರ ನವೆಂಬರ್ ನಲ್ಲಿ ಇದೇ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಇದೇ ವೇಗಿ ಸೀನ್ ಅಬಾಟ್ ಎಸೆದ ಬೌನ್ಸರ್ ವೊಂದು ಬ್ಯಾಟ್ಸಮನ್ ಫಿಲಿಪ್ ಹ್ಯೂಸ್ ಬಲಿ ಪಡೆದಿತ್ತು. ಸಿಡ್ನಿಯಲ್ಲಿ ನಡೆದ ಶೀಫೀಲ್ಡ್ ಶೀಲ್ಡ್ ದೇಶೀಯ ಟೂರ್ನಿಯಲ್ಲಿ ಅಬಾಟ್ ಎಸೆದ ಬೌನ್ಸರ್‌ ಆಸ್ಟ್ರೇಲಿಯದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹ್ಯೂಸ್ ದುರಂತ ಸಾವು ಆಸ್ಟ್ರೇಲಿಯಾ ಹಾಗೂ ವಿಶ್ವ ಕ್ರಿಕೆಟ್‌ಗೆ ದೊಡ್ಡ ಆಘಾತ ಉಂಟು ಮಾಡಿತ್ತು.

Comments are closed.