ಕರಾವಳಿ

ಟ್ರಾಫಿಕ್ ಸಮಸೈಗೆ ನಾಗರೀಕರ ಸ್ಪಂದನೆ ಅಗತ್ಯ : ಸಂಚಾರ ವಿಭಾಗದ ಟ್ರಾಫಿಕ್ ವಾರ್ಡನ್‌ಗಳ ಅಭಿನಂದನೆ ನೆರವೇರಿಸಿ ಕಮಿಷನರ್ ಟಿ.ಆರ್. ಸುರೇಶ್

Pinterest LinkedIn Tumblr

ಮಂಗಳೂರು, ಮಾರ್ಚ್.2 : ಮಂಗಳೂರು ನಗರ ಪೊಲೀಸ್ ಸಂಚಾರ ವಿಭಾಗದ ಟ್ರಾಫಿಕ್ ವಾರ್ಡನ್ ಗಳ ಅಭಿನಂದನೆ ಸಮಾರಂಭ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಅಭಿನಂದನೆ ನೆರವೇರಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರು, ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಇದನ್ನು ಸುವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಟ್ರಾಫಿಕ್ ಸಿಬ್ಬಂದಿ ಜತೆ ಟ್ರಾಫಿಕ್ ವಾರ್ಡನ್ಗಳು ಶ್ರಮಿಸುತ್ತಿದ್ದಾರೆ. ಟ್ರಾಫಿಕ್ ವಾರ್ಡನ್ ಸೇವೆಗೆ ಮುಕ್ತ ಅವಕಾಶ ವಿದ್ದು, ನಾಗರಿಕರು ಇದಕ್ಕೆ ಸ್ಪಂದಿಸದಿದ್ದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಸುಧಾರಣೆ ತರಲು ಸಾಧ್ಯವಿದೆ ಎಂದು ಹೇಳಿದರು.

ಮಂಗಳೂರು ಮತ್ತು ಬಂಟ್ವಾಳ ತಾಲೂಕಿನಲ್ಲಿ ಪ್ರಸ್ತುತ 6.50 ಲಕ್ಷ ವಾಹನಗಳು ನೋಂದಣಿಯಾಗಿದೆ. ಅದಲ್ಲದೆ ಪ್ರತಿನಿತ್ಯ ನೆರೆಯ ಉಡುಪಿ, ಕಾಸರಗೋಡು ಸೇರಿದಂತೆ ನಾನಾ ಕಡೆಯಿಂದ ಸಹಸ್ರಾರು ವಾಹನಗಳು ನಗರಕ್ಕೆ ಬಂದು ಹೋಗುತ್ತಿವೆ. ನಗರ ರಸ್ತೆಗಳ ಧಾರಣೆಗಿಂತಲೂ ವಾಹನ ಸಂಖ್ಯೆ ಹೆಚ್ಚಿದೆ. ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ಎರಡುವರೆ ವರ್ಷದ ಹಿಂದೆ ನಗರದಲ್ಲಿ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಸೇವೆ ಪರಿಚಯಿಸ ಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಟ್ರಾಫಿಕ್ ವಾರ್ಡನ್ ಮತ್ತಷ್ಟು ಹೆಚ್ಚಿಸುವಲ್ಲಿ ನಾಗರಿಕರ ಸ್ಪಂದನೆ ಮುಖ್ಯ. ಪೊಲೀಸ್ ಇಲಾಖೆ ಇದಕ್ಕೆ ಪೂರಕ ತರಬೇತಿ ನೀಡಲಿದೆ ಎಂದರು.

ಟ್ರಾಫಿಕ್ ನಿರ್ವಹಣೆಗೆ ಇಲಾಖಾ ಸಿಬ್ಬಂದಿ ಹರಸಾಹಸಪಡುತ್ತಿದ್ದು, ಅವರದೊಂದಿಗೆ ಟ್ರಾಫಿಕ್ ವಾರ್ಡನ್ಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಸಂಬಳ ಕೊಟ್ಟರೂ ಜನಸಿಗದ ಈ ಕಾಲದಲ್ಲಿ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ವಾರ್ಡನ್ಗಳಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿದೆ ಎಂದರು.

ಟ್ರಾಫಿಕ್ ಚೀಫ್ ವಾರ್ಡನ್ ಜೆ.ಜೆ. ಗೊನ್ಸಾಲ್ವಿಸ್ ಮಾತನಾಡಿ, ಮಂಗಳೂರು ನಗರ ಟ್ರಾಫಿಕ್ ಸುಧಾರಣೆಗೆ ವಾರ್ಡನ್ಗಳು ಅವಿರತ ಶ್ರಮಿಸುತ್ತಿದ್ದಾರೆ. ಇದರಿಂದ ಮಂಗಳೂರಿನ ನಾಗರಿಕರಿಗೆ ವಿಶೇಷ ಅನುಕೂಲ ಸಿಗುತ್ತಿದೆ. ನಮ್ಮಿಂದಾದಷ್ಟು ಸೇವೆಯನ್ನು ಸಮಾಜಕ್ಕೆ ನೀಡುವುದು ಈ ಸೇವೆಯ ಹಿಂದಿರುವ ಉದ್ದೇಶ. ಸಾಮಾಜಿಕ ಕಳಕಳಿಯಿರುವ ಮತ್ತಷ್ಟು ಮಂದಿ ಇದರಲ್ಲಿ ತೊಡಗಿಸಿಕೊಂಡಾಗ ಹೆಚ್ಚು ಲಪ್ರದವಾಗಲು ಸಾಧ್ಯ ಎಂದರು.

ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾರಂಭ ವರ್ಷದಲ್ಲಿ 45ರಷ್ಟಿದ್ದ ಟ್ರಾಫಿಕ್ ವಾರ್ಡನ್ ಸಂಖ್ಯೆ ಈಗ 16ಕ್ಕೆ ಇಳಿದಿದೆ. ಇದೊಂದು ಗೌರವಯುತವಾದ ಸೇವೆಯೆಂದು ಪರಿಗಣಿಸಿ ನಾಗರಿಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳ ಬೇಕು ಎಂದರು.

ವೇದಿಕೆಯಲ್ಲಿ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿ ರಸ್ತೆ ಸುರಕ್ಷತಾ ಆಫೀಸರ್ ಪ್ರವೀಣ್ಚಂದ್ರ ಶೆಟ್ಟಿ ಟ್ರಾಫಿಕ್ ಸಿಬ್ಬಂದಿ ಮತ್ತು ವಾರ್ಡನ್ ಸೇವೆಯನ್ನು ಶ್ಲಾಸಿದರು.

ಸನ್ಮಾನಿತರಿಗೆ ಗೌರವಧನ ವಿತರಣೆ :

11ಮಂದಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ರೋಷನ್ ಪತ್ರಾವೋ, ದೀನತ್ ಡೇಸಾ, ಫ್ರಾನ್ಸಿಸ್ ಮ್ಯಾಕ್ಸಿಂ ಮೋರಸ್, ಮುಹಮ್ಮದ್ ಎ.ಕೆ., ಜೇಮ್ಸ್ ಜೆ. ಮಾಡ್ತಾ, ಸುಜಿತ್ ಜೆ. ನೊರೊನ್ಹಾ, ಮೇರಿ ಪಿರೇರಾ, ಮಾವಿಸ್ ರೋಡ್ರಿಗಸ್, ಕ್ಲಿರ್ಡ್ ಲಿಯೋ ಡಿಸೋಜ, ಜೋಯಲ್ ಅಶೋಕ್ ಫೆರ್ನಾಂಡಿಸ್, ಹ್ಯಾರಿ ಪ್ರಶಾಂತ್ ಮಿರಾಂಡಾರಿರನ್ನು ಸನ್ಮಾನಿಸಲಾಯಿತು.ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜ ಅವರ ಪರವಾಗಿ ಸನ್ಮಾನಿತರಿಗೆ ಗೌರವಧನ ವಿತರಿಸಲಾಯಿತು. ಪೊಲೀಸ್ ಸಿಬ್ಬಂದಿ ಹರೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಎಸಿಪಿ ಮಂಜುನಾಥ್ ಶೆಟ್ಟಿ ವಂದಿಸಿದರು.

Comments are closed.