ಕರಾವಳಿ

ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದರೂ ಪದವಿ ದಾಖಲೆ ಸಲ್ಲಿಕೆ : ಮೇಯರ್ ಕವಿತಾ ಸನೀಲ್ ವಿರುದ್ಧ ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ

Pinterest LinkedIn Tumblr

ಮಂಗಳೂರು, ಫೆಬ್ರವರಿ 28: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದರೂ ತಾನು ಪಿಯುಸಿ ಹಾಗೂ ಪದವಿ ಮಾಡಿದ್ದೇನೆ ಎಂದು ಮೇಯರ್ ಕವಿತಾ ಸನೀಲ್ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂದು ಮನಪಾ ವಿಪಕ್ಷ ಸದಸ್ಯರು ಮೇಯರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಶೈಕ್ಷಣಿಕ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆದಿದೆ. ಎಸ್ಸೆಸ್ಸೆಲ್ಸಿ ಫೇಲಾದ ಕವಿತಾ ಸನಿಲ್ ತಮ್ಮದು ಪದವಿ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಮನಪಾ ವಿಪಕ್ಷ ಸದಸ್ಯರು ಮೇಯರ್ ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿರುವ ಬಗ್ಗೆ ಬೆಸೇಂಟ್ ಶಿಕ್ಷಣ ಸಂಸ್ಥೆ ನೀಡಿರುವ ದಾಖಲೆ ಪತ್ರವೊಂದನ್ನು ಸಭೆಯಲ್ಲಿ ಪ್ರದರ್ಶಿಸಿದ್ದಾರೆ.

ಕವಿತಾ ಸನಿಲ್ ಅವರು ಮೇಯರ್ ಆಗಿ ಪಾಲ್ಗೊಂಡಿದ್ದ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಕಾವೇರಿದ ಚರ್ಚೆ ನಡೆದಿದ್ದು, ಕವಿತಾ ಸನಿಲ್ ಅವರು ಚುನಾವಣೆಯ ಸಂದರ್ಭದಲ್ಲಿ ಸುಳ್ಳು ದಾಖಲೆ ನೀಡಿದ್ದಾರೆ. ಪದವಿ ಪಡೆದಿದ್ದೇನೆ ಎಂದು ಕವಿತಾ ಹೇಳಿದ್ದರು. ಆದರೆ ಅವರು ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಾರೆ. ಆದರೂ ಪಾಸ್ ಎಂದು ನಮೂದಿಸಿದ್ದಾರೆ. ಎಂದು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಆರೋಪ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ತಮ್ಮ ಮೇಲೆ ಮಾಡಿದ ಆರೋಪಕ್ಕೆ ಉತ್ತರಿಸಿದ ಮೇಯರ್ ಕವಿತಾ ಸನಿಲ್, ನಾನು ಎಸ್ಸೆಸ್ಸೆಲ್ಸಿಯವರೆಗೆ ರೆಗ್ಯುಲರ್ ವಿದ್ಯಾಭ್ಯಾಸ ಮಾಡಿದ್ದೇನೆ. ಪಿಯುಸಿ, ಡಿಗ್ರಿಯನ್ನು ದೂರ ಶಿಕ್ಷಣದ (correspondence) ಮೂಲಕ ಮಾಡಿದ್ದೇನೆ. ಎಂದು ಸೃಷ್ಠೀಕರಣ ನೀಡಿದ್ದು, “ಪಾಲಿಕೆ ಮೇಯರ್ ಆಗಲು ಡಿಗ್ರಿ ಆಗಬೇಕು ಎಂದೇನಿಲ್ಲ. ನನ್ನ ಶಿಕ್ಷಣದ ವಿಚಾರವನ್ನು ಮುಂದು ಮಾಡಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಆದರೆ, ಇದೇ ವೇಳೆ ಮೇಯರ್ ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿರುವ ಬಗ್ಗೆ ಬೆಸೇಂಟ್ ಶಿಕ್ಷಣ ಸಂಸ್ಥೆ ನೀಡಿದ ದಾಖಲೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

Comments are closed.