ಕರಾವಳಿ

ಬಿಎಸ್‌ಸಿ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಭೀಕರವಾಗಿ ಹತ್ಯೆಗೈದ ಸಹಪಾಠಿ :ಪ್ರೇಮ ವೈಫಲ್ಯ ಶಂಕೆ..?

Pinterest LinkedIn Tumblr

ಸುಳ್ಯ, ಫೆಬ್ರವರಿ, 20: ಸುಳ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಅದೇ ಕಾಲೇಜಿನ ವಿದ್ಯಾರ್ಥಿ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆಗೈದ ಹ್ರದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿ (ಎನ್‌ಎಂಸಿ) ನ ವಿದ್ಯಾರ್ಥಿನಿ ಅಕ್ಷತಾ ಹತ್ಯೆಯಾದವರು.ಇದೇ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ, ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಾರ್ತಿಕ್ (ಅಕ್ಷತಾ ಸಹಪಾಠಿ) ಮಂಗಳವಾರ ಸಂಜೆ ಅಕ್ಷತಾರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರ ನಿವಾಸಿಯಾಗಿದ್ದ ಅಕ್ಷತಾ ಇಂದು ಸಂಜೆ ಕಾಲೇಜಿನಿಂದ ಬರುತ್ತಿದ್ದ ವೇಳೆ ರೋಟರಿ ಶಾಲೆಯ ಬಳಿ ಆರೋಪಿ ಕಾರ್ತಿಕ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿ ಅಕ್ಷತಾರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಅವರು ದಾರಿಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಅಕ್ಷತಾಳಿಗೆ ಏಳು ಬಾರಿ ಚೂರಿಯಿಂದ ಇರಿದ ಆರೋಪಿ ತಾನು ಕೂಡಾ ಕೈಯನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಕೈಗೆ ಗಾಯ ಮಾಡಿಕೊಂಡಿರುವ ಕಾರ್ತಿಕ್ ನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸುಳ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕಾರ್ತಿಕ್ ಸುಳ್ಯ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಇದೊಂದು ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟ ಕೊಲೆಯಾಗಿದ್ದು, ಅಕ್ಷತಾ ಮತ್ತು ಕಾರ್ತಿಕ್ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್‌.ಸಿ ವ್ಯಾಸಂಗ ಮಾಡುತ್ತಿದ್ದರು. ಕಾರ್ತಿಕ್ ಅಕ್ಷತಾಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ನಿರಾಕರಿಸಿದ ಹಿನ್ನಲೆಯಲ್ಲಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ, ಪ್ರೇಮ ವೈಫಲ್ಯದಿಂದ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.

Comments are closed.