ಕರಾವಳಿ

ಶಿವಾಜಿ ವೈಭೋಗದ ಜೀವನಕ್ಕೆ ಮಹತ್ವ ನೀಡಿಲ್ಲ : ಡಾ.ಉದಯಕುಮಾರ್

Pinterest LinkedIn Tumblr

ಮಂಗಳೂರು :ಶಿವಾಜಿಯು ಒಬ್ಬ ದಕ್ಷ ಆಡಳಿತಗಾರನಾಗಿದ್ದು ಆತ ತನ್ನ ಸಾಮ್ರಾಜ್ಯ ವಿಸ್ತರಣೆ ಹಾಗೂ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡಲು ಸದಾ ಹಂಬಲಿಸುತ್ತಿದ್ದ. ಬದಲಾಗಿ ಯಾವುದೇ ವೈಭೋಗದ ಜೀವನವನ್ನು ಬಯಸಿರಲಿಲ್ಲ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ.ಉದಯಕುಮಾರ್ ಹೇಳಿದ್ದಾರೆ.

ಅವರು ಜಿಲ್ಲಾಡಳಿತ, ದಕ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಮತ್ತು ಆರ್ಯ ಯಾನೆ ಮರಾಠ ಸಮಾಜ ಸಂಘದ ಸಂಯುಕ್ತ ಆಶ್ರಯದಲ್ಲಿ ಆರ್ಯ ಮರಾಠ ಭವನ ಜೆಪ್ಪಿನ ಮೊಗರು ಮಂಗಳೂರು ಇಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತಿ ಆಚರಣೆಯಲ್ಲಿ ಶಿವಾಜಿ ಜಯಂತಿಯ ಕುರಿತು ಸಂದೇಶ ನೀಡಿದರು.

ಶಿವಾಜಿಯು ಜಾತಿ ವ್ಯವಸ್ಥೆಯ ಪ್ರತಿಪಾದಿತನಾಗದೇ, ದೇಶದ ಸಂಸ್ಕೃತಿ ಸಾಹಿತ್ಯ ಜನಪದ ಕಲೆಗಳೆಲ್ಲವುಗಳನ್ನು ಉನ್ನತ ಮಟ್ಟಕ್ಕೇರಿಸುವ ಕಲ್ಪನೆಗಳನ್ನು ಹೊಂದಿದ್ದರು. ಶಿವಾಜಿಯ ರಾಜ್ಯಾಡಳಿತ, ಚತುರ ಸೇನಾಡಳಿತ, ನ್ಯಾಯಯುತವಾದ ತೆರಿಗೆ ವ್ಯವಸ್ಥೆ, ಸಾಮ್ರಜ್ಯದ ವಿಸ್ತರಣೆ, ಸಾಮ್ರಾಜ್ಯದ ಹತೋಟಿ, ಹಾಗೂ ಭೌಗೋಳಿಕ ಅಧ್ಯಯನಕ್ಕಾಗಿ ಶಿವಾಜಿಯನ್ನು ಸದಾ ಕಾಲ ನೆನೆಯಬೇಕು ಅಲ್ಲದೇ ನೌಕಪಡೆಯನ್ನು ಬಲಿಷ್ಠವಾಗಿ ನಿರ್ಮಿಸಿ ಅಭಿವೃದ್ಧಿಪಡಿಸಿದ ಖ್ಯಾತಿ ಶಿವಾಜಿಗೆ ಸಲ್ಲಬೇಕು ಎಂದು ಗುಣಗಾನ ಮಾಡಿದರು.

ಶಿವಾಜಿಯ ತಾಯಿಯಂತೆ ಎಲ್ಲ ತಾಯಂದಿರೂ ಕೂಡ ತಮ್ಮ ಮಕ್ಕಳನ್ನು ಹಾಗೂ ಅವರ ಭವಿಷ್ಯವನ್ನು ರೂಪಿಸಿ ಅವರಿಗೆ ಜೀವನದ ಮೌಲ್ಯಗಳನ್ನು ಮತ್ತು ಸಮಾಜಮುಖಿಯಾಗಿ ಬದುಕುವ ಶಿಕ್ಷಣವನ್ನು ನೀಡಬೇಕೆಂದು ಉದಯಕುಮಾರ್ ಕರೆಯಿತ್ತರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ ಹೆಚ್ ಖಾದರ್ ಮಾತನಾಡಿ, ಶಿವಾಜಿಯ ಚರಿತ್ರೆಯು ಅತ್ಯುನ್ನತವಾಗಿದ್ದು ಆತನ ತ್ರೆಯು ಸದಾ ಸ್ಮರಣೀಯವಾಗಿದೆ . ವಿದ್ಯಾರ್ಥಿಗಳೆಲ್ಲರೂ ಶಿವಾಜಿ ಮಹಾರಾಜರ ಚರಿತ್ರೆ ಇತಿಹಾಸ, ಹಾಗೂ ಚಿಂತನೆಯನ್ನು ಅಧ್ಯಯನ ಮಾಡಬೇಕು ಎಂದರು.

ಆರ್ಯ ಮರಾಠ ಸಮಾಜದ ಅಧ್ಯಕ್ಷ ದೇವೋಜಿ ರಾವ್ ಜಾಧವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯ ಮರಾಠ ಸಮಾಜ ಮತ್ತು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‍ನ ವತಿಯಿಂದ ನಡೆಸಲಾದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಶುಸಂಗೋಪನಾ ಇಲಾಖೆಯ ಗುರುಮೂರ್ತಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ವಿ ಸುರೇಶ್ ರಾವ್ ಕರ್‍ಮೋರೆ, ಆರ್ಯ ಮರಾಠ ಸಮಾಜದ ಉಪಾಧ್ಯಕ್ಷೆ ಪ್ರೇಮಲತಾ ವೈ ರಾವ್, ಸಹಕಾರಿ ಇಲಾಖೆಯ ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.

Comments are closed.