ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವ ನೀರವ್ ಮೋದಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅತ್ಯುತ್ಸಾಹ ಬಾಕಿ ಇರುವ ಮೊತ್ತವನ್ನು ವಾಪಸ್ ಪಡೆಯುವ ಎಲ್ಲಾ ಆಯ್ಕೆಗಳನ್ನೂ ಇಲ್ಲವಾಗಿಸಿದೆ ಎಂದು ಹೇಳಿದ್ದಾರೆ.
ಫೆ.15-16 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜ್ಮೆಂಟ್ ಗೆ ಪತ್ರ ಬರೆದಿರುವ ನೀರವ್ ಮೋದಿ, ತಪ್ಪಾಗಿ ಉಲ್ಲೇಖಿಸಲಾದ ಸಾಲದ ಹೊಣೆಗಾರಿಕೆ ಮಾಧ್ಯಮಗಳಿಗೆ ಆಹಾರವಾಗಿತ್ತು, ಪರಿಣಾಮವಾಗಿ ತಕ್ಷಣವೇ ಶೋಧ ಕಾರ್ಯಾಚರಣೆ ಹಾಗೂ ಮುಟ್ಟುಗೋಲು ಪ್ರಕ್ರಿಯೆ ನಡೆಯಿತು, ಇದರಿಂದಾಗಿ ಫೈರ್ ಸ್ಟಾರ್ ಇಂಟರ್ ನ್ಯಾಷನಲ್ ಹಾಗೂ ಫೈರ್ ಸ್ಟಾರ್ ಡೈಮಂಡ್ ಇಂಟರ್ನ್ಯಾಷನಲ್ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಒಡೆತನದ ಸಂಸ್ಥೆಗಳ ಬಾಕಿ ಮೊತ್ತವನ್ನು ಬ್ಯಾಂಕ್ ಗಳಿಗೆ ಪಾವತಿ ಮಾಡುವ ನಮ್ಮ ಸಾಮರ್ಥ್ಯಕ್ಕೇ ಕೊಡಲಿ ಪೆಟ್ಟು ಬಿತ್ತು ಎಂದು ನೀರವ್ ಮೋದಿ ಆರೋಪಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ಧವೇ ಆರೋಪ ಮಾಡಿರುವ ನೀರವ್ ಮೋದಿ, ನಿಮ್ಮ ಬ್ಯಾಂಕ್ ಕೈಗೊಂಡಿರುವ ಕ್ರಮಗಳಿಂದ ನನ್ನ ಉದ್ಯಮದ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ, ನೀವು ಕೈಗೊಂಡಿರುವ ಕ್ರಮಗಳು ಸಾಲ ವಾಪಸ್ ಪಡೆದುಕೊಳ್ಳಲು ನಿಮಗೆ ಇದ್ದ ಆಯ್ಕೆಗಳೆಲ್ಲವನ್ನೂ ಸೀಮಿತಗೊಳಿಸಿವೆ ಎಂದು ಕಿಡಿ ಕಾರಿದ್ದಾರೆ.