ಮಂಗಳೂರು,ಫೆಬ್ರವರಿ.19: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದ್ದು, ರಾಜ್ಯ ಕರಾವಳಿಯಲ್ಲಿ ಮತ್ತೆ ಕಮಲ ಅರಳಿಸುವ ಉದ್ದೇಶ ಹೊಂದಿರುವ ಕೇಸರಿ ಪಕ್ಷದ ಚುನಾವಣಾ ರಣತಂತ್ರದ ಭಾಗವಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದ.ಕ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಾಳೆ ಹಮ್ಮಿಕೊಂಡಿರುವ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಅಮಿತ್ ಶಾ ಅವರು ಇಂದು ನಿಗದಿಯಾಗಿದ್ದ ಸಮಯಕ್ಕಿಂತ ಎರಡು ಗಂಟೆ ತಡವಾಗಿ ರಾತ್ರಿ 7.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೆಂಜಾರಿನ ವಿಮಾನ ನಿಲ್ದಾಣದ ಬಳಿ ಬಿಜೆಪಿ ಮುಖಂಡರು ಅಮಿತ್ ಶಾ ಅವರಿಗೆ ಸಾಂಪ್ರದಾಯಿಕ ಪೇಟ ತೊಡಿಸಿ ಸ್ವಾಗತಿಸಿದರು.
ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು,ಸಂಸದ ನಳಿನ್ ಕುಮಾರ್ ಕಟೀಲ್,ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಕರ್ನಾಟಕ ವಿಧಾನ ಸಭೆಯ ಮಾಜಿ ಉಪ ಸಭಾಪತಿ ಯೋಗೀಶ್ ಭಟ್, ಜಿಲ್ಲಾ ಪಂಚಾಯತ್ನ್ ಉಪಾಧ್ಯಕ್ಷೆ ಕಸ್ತೂರಿ ಪಂಜ,ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲ್, ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮತ್,ಎಂ.ಬಿ.ಪುರಾಣಿಕ್,ಸತ್ಯಜಿತ್ ಸುರತ್ಕಲ್, ಸುಲೋಚನಾ ಭಟ್,ಜಗದೀಶ್ ಶೇಣವ,ರವಿಶಂಕರ ಮಿಜಾರು,ಡಾ.ವೈ ಭರತ್ ಶೆಟ್ಟಿ,ಜಿತೇಂದ್ರ ಕೊಟ್ಟಾರಿ,ಉಮಾನಾಥ ಕೋಟ್ಯಾನ್ ಮೊದಲಾದವರು ಅಮಿತ್ ಶಾ ರವರನ್ನು ಸ್ವಾಗತಿಸಿದರು.
ಆದರೆ ಈ ಸಂದರ್ಭದಲ್ಲಿ ಅಲ್ಪ ಅನಾರೋಗ್ಯದ ಕಾರಣ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡದೆ ಸಾರ್ವಜನಿಕರತ್ತ ಕೈ ಬೀಸಿದ ಅಮಿತ್ ಶಾ ಅವರು ನೇರವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ ಹಿನ್ನೆಲೆಯಲ್ಲಿ ಅವರಿಗಾಗಿ ಕಾದಿದ್ದ ಕೆಲವರು ನಿರಾಶೆಗೊಂಡಿದ್ದಾರೆ.
ಅಮಿತ್ ಶಾ ಅವರು ಸೋಮವಾರ ರಾತ್ರಿ ಸುಬ್ರಹ್ಮಣ್ಯದಲ್ಲಿ ತಂಗಲಿದ್ದಾರೆ. ನಾಳೆ ಕುಕ್ಕೆಯಲ್ಲಿ ಮುಂಜಾನೆ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ ಈ ಮೂಲಕ ರಾಜ್ಯದ ಕರಾವಳಿಯಲ್ಲಿ ಅಧಿಕೃತ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಉಪಹಾರ ಮುಗಿಸಿ ಬೆಳಗ್ಗೆ 9 ಗಂಟೆಗೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಬಳಿಕ ನಾಳೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಬೆಳ್ತಂಗಡಿ,ಬಂಟ್ವಾಳಗಳಲ್ಲಿ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನವಶಕ್ತಿ ಸಂಗಮ ನಡೆಯಲಿದ್ದು ಅದರಲ್ಲೂ ಬಾಗವಹಿಸಲಿದ್ದಾರೆ. ಕುಲ್ಕುಂದ ಮತ್ತು ಬಂಟ್ವಾಳದಲ್ಲಿ ನಡೆಯಲಿರುವ ನವಶಕ್ತಿ ಸಂಗಮದಲ್ಲಿ ಸೀಮಿತ ಕಾರ್ಯಕರ್ತರನ್ನು ಹೊರತುಪಡಿಸಿ ಉಳಿದವರಿಗೆ ಪಾಲ್ಗೊಳ್ಳುವ ಅವಕಾಶ ಇಲ್ಲ ಎಂದು ಹೇಳಲಾಗಿದೆ.
ಪ್ರವಾಸದ ಸಂದರ್ಭದಲ್ಲಿ ಇತ್ತೀಚಿಗೆ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಿಜೆಪಿ ಕಾರ್ಯಕರ್ತ ಕಾಟಿಪಳ್ಳದ ದೀಪಕ್ ರಾವ್ ಮನೆಗೆ ಅಶಮಿತ್ ಶಾ ಭೇಟಿ ನೀಡಲಿದ್ದಾರೆ. ನಂತರ ಅಲ್ಲಿಂದ ಉಡುಪಿಗೆ ಪ್ರಯಾಣ ಬೆಳೆಸಲಿದ್ದು,ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರರ ಸಮಾವೇಶದಲ್ಲಿ ಭಾಗವಹಿಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.