ಕರ್ನಾಟಕ

ಕಾಂಗ್ರೆಸ್ ‘ಕಮಿಷನ್‌ ಸರಕಾರ’ ವಾಗಿದ್ದು, ರಾಜ್ಯದ ಸರ್ವಾಂಗೀಣ ಪ್ರಗತಿಗೆ ಬಿಜೆಪಿ ನಾಯಕತ್ವದ ‘ಮಿಷನ್‌’ ಸರಕಾರದ ಅಗತ್ಯವಿದೆ: ಮೋದಿ

Pinterest LinkedIn Tumblr

ಮೈಸೂರು: ರಾಜ್ಯ ಸರಕಾರ ‘ಕಮಿಷನ್‌ ಸರಕಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸೋಮವಾರ ರೈಲ್ವೇ ಇಲಾಖೆಯ ಹಲವು ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಕರ್ನಾಟಕದ ಕಾಂಗ್ರೆಸ್‌ ಸರಕಾರ ಜನರ ಅಭಿವೃದ್ಧಿ ಬಗ್ಗೆ ಯಾವತ್ತೂ ಆದ್ಯತೆಯನ್ನೇ ನೀಡಿಲ್ಲ, ಅದು ಬರೀ ‘ಕಮಿಷನ್‌ ಸರಕಾರ’ ವಾಗಿದ್ದು, ರಾಜ್ಯದ ಸರ್ವಾಂಗೀಣ ಪ್ರಗತಿಗೆ ಬಿಜೆಪಿ ನಾಯಕತ್ವದ ‘ಮಿಷನ್‌’ ಸರಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

‘ಕರ್ನಾಟಕದಲ್ಲಿ ಎಲ್ಲಿಯ ವರೆಗೆ ಕಾಂಗ್ರೆಸ್ ಸರಕಾರ ಇರುವುದೋ, ಅಲ್ಲಿಯವರೆಗೂ ರಾಜ್ಯ ಪ್ರಗತಿ ಹೊಂದದು. ಕರ್ನಾಟಕಕ್ಕೆ ‘ಕಮಿಷನ್‌’ ಸರಕಾರ ಬೇಕಿಲ್ಲ; ಬದಲಾಗಿ ಬಿಜೆಪಿ ನೇತೃತ್ವದ ‘ಮಿಷನ್‌’ (ಧ್ಯೇಯವುಳ್ಳ) ಸರಕಾರ ಬೇಕಿದೆ. ಕಾಂಗ್ರೆಸ್‌ ಈ ರಾಜ್ಯವನ್ನು ಹಾಳುಗೆಡವಿದ್ದು, ಚುನಾವಣೆಯಲ್ಲಿ ಜನತೆ ಅದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಪ್ರಧಾನಿ ಮೋದಿ ನುಡಿದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಈ ದೇಶವನ್ನು 50 ವರ್ಷಗಳಿಗೂ ಹೆಚ್ಚು ಕಾಲ ಆಳಿದರೂ 4 ಕೋಟಿ ಕುಟುಂಬಗಳು ವಿದ್ಯುತ್‌ ಇಲ್ಲದೆ ಜೀವನ ನಡೆಸುವಂತಾಗಿದೆ ಎಂದು ಪ್ರಧಾನಿ ಟೀಕಿಸಿದರು.

‘ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಒಂದೇ ಪಕ್ಷ ಈ ದೇಶವನ್ನು ಆಳಿದೆ. ಹಾಗಿದ್ದರೂ 4 ಕೋಟಿ ಕುಟುಂಬಗಳು ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲೇ ಬದುಕುವಂತಾಗಲು ಕಾರಣವೇನು? ಇಷ್ಟು ವರ್ಷಗಳಲ್ಲಿ ಜನರ ಅಭಿವೃದ್ಧಿಯನ್ನು ಏಕೆ ಖಾತ್ರಿಪಡಿಸಲಿಲ್ಲ?’ ಎಂದು ಪ್ರಶ್ನಿಸಿದ ಮೋದಿ, ದೇಶದ ಜನತೆ ಇನ್ನು ಯಾವತ್ತೂ ಕಾಂಗ್ರೆಸ್ಸನ್ನು ನಂಬುವುದಿಲ್ಲ ಎಂದರು.

ಕಾಂಗ್ರೆಸ್‌ ಈ ದೇಶವನ್ನು ಆಳಿದರೂ ಅಭಿವೃದ್ಧಿಪಡಿಸುವ ಬದಲು ಹಾಳು ಮಾಡುವುದಕ್ಕಷ್ಟೇ ಪ್ರಯತ್ನಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

‘ಹಲವಾರು ವರ್ಷಗಳಿಂದಲೂ ಸಂಸತ್ತಿನಲ್ಲಿ ಯೋಜನೆಗಳ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ವಾಸ್ತವದಲ್ಲಿ ಅನುಷ್ಠಾನವಾಗಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಆ ಯೋಜನೆಗಳನ್ನೆಲ್ಲ ಗುರುತಿಸಿ ಜಾರಿಗೊಳಿಸಲು ಆರಂಭಿಸಿದೆವು’ ಎಂದು ಮೋದಿ ತಿಳಿಸಿದರು.

‘ಆಧುನಿಕ ಮತ್ತು ತಾಂತ್ರಿಕವಾಗಿ ಸುಧಾರಿತ ರೈಲ್ವೇ ವ್ಯವಸ್ಥೆಯನ್ನು ಸೃಷ್ಟಿಸುವುದು ಅತ್ಯಂತ ಮಹತ್ವದ್ದಾಗಿದೆ. ದೇಶಾದ್ಯಂತ ರೈಲ್ವೆ ಜಾಲವನ್ನು ಬಲಪಡಿಸುತ್ತಿದ್ದೇವೆ. ಕರ್ನಾಟಕವೂ ಅದರ ಲಾಭಗಳನ್ನು ಪಡೆಯುತ್ತಿದೆ’ ಎಂದು ಮೋದಿ ನುಡಿದರು.

Comments are closed.