ಕರಾವಳಿ

ಕುಂದಾಪುರದ ಕೋಣಿಗೆ 6 ತಿಂಗಳ ಹಿಂದೆ ಬಂದಿದ್ದ ಕಾಶಿನಾಥ್ ಏನೇನು ಮಾಡಿದ್ರು ಗೊತ್ತಾ?

Pinterest LinkedIn Tumblr

ಕುಂದಾಪುರ: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಬಹುಮುಖ ಪ್ರತಿಭೆಯ ಕಾಶಿನಾಥ್ ಮೂಲತಃ ಕುಂದಾಪುರದವರು.

ಕುಂದಾಪುರ ತಾಲೂಕಿನ ಕೋಟೇಶ್ವರದ ಮಾರ್ಕೋಡು ಇವರ ಹುಟ್ಟೂರು. ಗೋಪಾಡಿಯ ಬೆಣ್ತಕ್ಕಿ ಮನೆ ಇವರ ಅಜ್ಜನ ಮನೆ. 1950 ನೇ ಇಸವಿಯಲ್ಲಿ ಜನಿಸಿದ ಕಾಶಿನಾಥ್ ಅವರ ತಂದೆ ವಾಸುದೇವ ಹತ್ವಾರ್, ತಾಯಿ ಸರಸ್ವತಿ. ನಾಲ್ವರು ಮಕ್ಕಳ ಪೈಕಿ ಕಾಶಿನಾಥ್ ಮೊದಲಿಗರು. ಗೋಪಾಡಿಯಿಂದ ಕಾಶಿನಾಥ್ ಅಜ್ಜ ಕೋಣಿಗೆ ಬಂದು ನೆಲೆಸಿ ಅಲ್ಲಿ ಮನೆ ಕಟ್ಟಿದವರು. ಬಾಯದ ಕೆಲ ಸಮಯವನ್ನು ಕೋಣಿಯಲ್ಲಿ ಕಳೆದ ಕಾಶಿನಾಥ ಅವರು 1955ರಲ್ಲಿ ಕೋಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಎರಡು ವರ್ಷಗಳ ಕಾಲ ಶಿಕ್ಷಣ ಪಡೆಯುತ್ತಾರೆ. ಬಳಿಕ ಇವರ ಕುಟುಂಬ ಬೇರೆಡೆಗೆ ತೆರಳುತ್ತಾರೆ. ಈಗಲೂ ಕಾಶಿನಾಥ್ ಓದಿದ ಬಗೆಗಿನ ದಾಖಲೆ ಶಾಲೆಯಲ್ಲಿದೆ.

ಅಗ್ಗಾಗೆ ಊರಿಗೆ ಆಗಮಿಸುವ ಕಾಶಿನಾಥ್ ಕುಂದಾಪುರಕ್ಕೆ ಬಂದಾಗಲೆಲ್ಲಾ ತನ್ನ ಹುಟ್ಟುರು ಕೋಣಿಗೆ ಹಾಗೂ ಗೋಪಾಡಿಗೆ ಬರುತ್ತಾರೆ. ಅಲ್ಲಿನ ಪರಿಸರದಲ್ಲಿ ಕೆಲ ಕಾಲ ಕಾಲ ಕಳೆಯುತ್ತಾರೆಂದು ಅವರನ್ನು ಸಮೀಪದಿಂದ ಬಲ್ಲವರು ಹೇಳುತ್ತಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಕೋಣಿಗೆ ಬಂದಿದ್ದ ಅವರು ಮನೆಯ ತುಳಸಿ ಕಟ್ಟೆ ವೀಕ್ಷಿಸಿ, ಬಾವಿಯ ನೀರು ಕುಡಿದು, ಎರಡು ಬಾಟಲಿಯಲ್ಲಿ ಬಾವಿ ನೀರು ತುಂಬಿಸಿಕೊಂಡು ತೆರಳಿದ್ದರು. ಅಲ್ಲದೇ ಮನೆಯ ಜಾಗದಲ್ಲಿರುವ ಅಶ್ವಥ ಮರವೊಂದನ್ನು ಎಂದಿಗೂ ಕಡಿಯಬೇಡಿ ಎಂದು ಸದ್ಯ ಆ ಮನೆಯಲ್ಲಿ ವಾಸ್ತವ್ಯವಿರುವವರಲ್ಲಿ ವಿನಂತಿಸಿದ್ದರು ಎನ್ನಲಾಗಿದೆ. ಸರಳ ವ್ಯಕ್ತಿತ್ವದ ಕಾಶಿನಾಥ್ ಬಗ್ಗೆ ಅವರ ನಿಕಟವರ್ತಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

Comments are closed.