ಕರಾವಳಿ

ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಮರ್ಪಣಾ ಸಮಾರಂಭ

Pinterest LinkedIn Tumblr

ಉಡುಪಿ: ದೇಶದಲ್ಲಿ ಆರೋಗ್ಯ ನೀತಿ 2017ರನ್ವಯ ಆರೋಗ್ಯ ಸಂರಕ್ಷಣೆಗಾಗಿ ಕಾಯಿಲೆ ಬಾರದಂತೆ ತಡೆ ಮತ್ತು ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ವೈದ್ಯ ಪದ್ಧತಿ ಮತ್ತು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ ಎಂದು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡ ಹೇಳಿದರು.

ಅವರು ಗುರುವಾರ ಜಿಲ್ಲಾಡಳಿತ, ಉಡುಪಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿ.ಆರ್. ಎಸ್.ಸ್ವಾಸ್ಥ್ಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದ ಆರೋಗ್ಯ ವ್ಯವಸ್ಥೆಯನ್ನು ಸದೃಢವಾಗಿಸಲು ಅದರಲ್ಲೂ ಮುಖ್ಯವಾಗಿ ತಾಯಿ ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತಾಯಿ ಮರಣ ಮತ್ತು ಹಸುಗೂಸು ಮರಣ ಪ್ರಮಾಣದಲ್ಲಿ ಗಮನೀಯ ಪ್ರಮಾಣದ ಇಳಿಕೆಯನ್ನು ದಾಖಲಿಸಲಾಗಿದೆ. ಎಲ್ಲರಿಗೂ ಆರೋಗ್ಯ ಪರಿಕಲ್ಪನೆಗೆ ಆದ್ಯತೆ ನೀಡಲಾಗಿದ್ದು, ಗರ್ಭಿಣಿಯರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಪ್ರತಿ ತಿಂಗಳ 9ನೇ ತಾರೀಖಿನಂದು ಖಾಸಗಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸೂತಿ ತಜ್ಞರು ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಂದಿರ ತಪಾಸಣೆ ಮಾಡುತ್ತಿದ್ದಾರೆ. ಇದರಿಂದಾಗಿ ಬಹಳಷ್ಟು ಉತ್ತಮ ಫಲಿತಾಂಶವೂ ದಾಖಲಾಗಿದೆ ಎಂದರು.

ಇದೇ ಮಾದರಿ ಉಡುಪಿಯಲ್ಲೂ ಕೈಗೂಡಿದ್ದು ತಾಯಿ ಮಕ್ಕಳ ಆಸ್ಪತ್ರೆಯಿಂದ ಸಾಮಾನ್ಯರಿಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ ಎಂದು ಹಾರೈಸಿದರು. ರಾಜ್ಯಕ್ಕೆ ಆರೋಗ್ಯ ವ್ಯವಸ್ಥೆಗೆ ಪೂರಕವಾಗಿ ಅದರಲ್ಲೂ ಉಡುಪಿ ಜಿಲ್ಲೆಗೆ ಕ್ರಿಯಾ ಯೋಜನೆ ಅನುಷ್ಠಾನ ವರದಿ ನೀಡಿದರೆ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಇನ್ನಷ್ಟು ಅನುದಾನ ನೀಡುವ ಭರವಸೆಯನ್ನೂ ಸಭೆಯಲ್ಲಿ ನೀಡಿದರು.

ಕೇಂದ್ರ ಸರ್ಕಾರದ ಇನ್ನೊಂದು ಪ್ರಮುಖ ಆರೋಗ್ಯ ಯೋಜನೆ ’ಅಮೃತ್ ದೀನ್ ದಯಾಳ್’ ಇದರಿಂದಾಗಿ ಜನರಿಗೆ ಬ್ರಾಂಡೆಡ್ ಜೌಷಧಿ ಮತ್ತು ಆರೋಗ್ಯ ಸೇವೆ ಈಗಿರುವುದಕ್ಕಿಂತ ಅರ್ಧ ದರಕ್ಕೆ ಲಭ್ಯವಾಗಿದೆ ಎಂದರು. ಎಲ್ಲರ ಸಹಯೋಗದಿಂದ ಎಲ್ಲರಿಗೂ ಆರೋಗ್ಯ ಎಂಬುದು ಇಲಾಖೆಯ ಧ್ಯೇಯವಾಗಿದ್ದು, ದೇಶದ ಜನರ ಆರೋಗ್ಯ ಸಂವರ್ಧನೆಗೆ ಅನುಕೂಲ ನೀತಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ ಎಂದರು. ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯು ಉಳಿದವರಿಗೆ ಸ್ಪೂರ್ತಿದಾಯಕವಾಗಲಿ ಎಂದರು. ಬಡವರಿಗೆ ಉಚಿತವಾಗಿ ಹಾಗೂ ಮೌಲ್ಯಯುತವಾದ ಸೇವೆಗಳನ್ನು ನೀಡುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿರುವ ಆಸ್ಪತ್ರೆಯು ಒಟ್ಟು 200 ಬೆಡ್‌ಗಳನ್ನು ಹೊಂದಿದೆ. ಬಡವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಪಂಚತಾರಾ ಮಟ್ಟದಲ್ಲಿ ಸೇವೆಗಳನ್ನು ನೀಡಲಿ ಎಂದು ಮೀನುಗಾರಿಕೆ,ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿ ಜಿಲ್ಲೆಯು ಎಲ್ಲಾ ಕ್ಷೇತ್ರದಲ್ಲಿಯೂ ಉತ್ತಮ ಸ್ಥಾನ ಹೊಂದಿದ್ದು, ವೈದ್ಯಕೀಯ ಕ್ಷೇತ್ರವೂ ಉತ್ತಮ ಗುಣಮಟ್ಟದಲ್ಲಿ ಸೇವೆ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧನ ಬನ್ನಂಜೆ, ಡಾ ಬಿ ಆರ್ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಪಾಲ್ಗೊಂಡರು.

Comments are closed.