
ಮಂಗಳೂರು, ಜನವರಿ.16: ವಿಶ್ವ ಗುರುವಾಗುವ ಭಾರತ ದೇಶ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದೆ. ಆದರೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಹೊಂದಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ನಗರದ ಮಂಗಳ ವಾಲಿಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ಕ್ರೀಡಾಭಾರತಿ ಮಂಗಳೂರು, ಜೈ ಹಿಂದ್ ಈಜು ಕ್ಲಬ್ ಸಹಕಾರದೊಂದಿಗೆ ಆಯೋಜಿಸಿರುವ ವಾಲಿಬಾಲ್ ಪಂದ್ಯಾಟ ಮತ್ತು 5 ಜಿಲ್ಲೆಗಳ ಅಂತರ್ ಜಿಲ್ಲಾ ಈಜು ಸ್ಪರ್ಧೆ 2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಆರ್ಥಿಕ, ಶಿಕ್ಷಣ ಸೇರಿದಂತೆ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದೆ. ಕೇಂದ್ರ ಸರಕಾರ ಕ್ರೀಡಾಪಟುಗಳಿಗೆ ಒಂದು ಸಾವಿರ ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾದಲ್ಲಿ ವಿಮಾನದ ಭತ್ಯೆಯನ್ನು ನೀಡುತ್ತಿದೆ.ಕ್ರೀಡಾಳುಗಳಿಗೆ ಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ವಿದ್ಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಿದ್ದರು.

ಈ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯದ ಐದು ಜಿಲ್ಲೆಗಳಿಂದ 20ಕ್ಕೂ ಹೆಚ್ಚು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದೆ.

ಕ್ರೀಡಾಭಾರತಿಯ ಕ್ಷೇತ್ರಿಯ ಸಂಯೋಜಕ ಚಂದ್ರಶೇಖರ್ ಜಹಾಗೀರ್ದಾರ್ ವಹಿಸಿದ್ದರು. ಚಲನಚಿತ್ರ ನಟಿ ತಾರಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ. ಪಿ.ವಾಮನ ಶೆಣೈ, ಮೇಯರ್ ಕವಿತಾ ಸನಿಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ಸ್ಥಳೀಯ ಕಾರ್ಪೋರೇಟರ್ ಜಯಂತಿ ಆಚಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ,ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆಲೋಶಿಯಸ್ ಡಿಸೋಜ, ಯುವ ಸಬಲೀಕರಣ ಮತ್ತು ಕ್ರೀಡಾಕಾರಿ ಲಿಲ್ಲಿ ಪಾಯಸ್, ಮಂಗಳೂರು ಈಜುಕೊಳದ ವ್ಯವಸ್ಥಾಪಕ ರಮೇಶ್ ಬಿಜೈ, ಕ್ರೀಡಾಭಾರತಿಯ ಅಧ್ಯಕ್ಷ ಕರಿಯಪ್ಪ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆಘಿ, ಮೊದಲಾದವರು ಉಪಸ್ಥಿತರಿದ್ದರು.
ಮಮತಾ ಪ್ರಾರ್ಥಿಸಿದರು. ಕ್ರೀಡಾಭಾರತಿಯ ಗೌರವ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಸ್ವಾಗತಿಸಿದರು.
Comments are closed.