ಕರಾವಳಿ

ಅನ್ಯಕೋಮಿನ ಯುವಕರೊಂದಿಗೆ ವಿಹಾರಕ್ಕೆ ಬಂದಿದ್ದ ವಿಧ್ಯಾರ್ಥಿನಿಯರ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ : ಲವ್ ಜಿಹಾದ್ ಆರೋಪ

Pinterest LinkedIn Tumblr

ಮಂಗಳೂರು, ಜನವರಿ.2: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ವಿಹಾರಕ್ಕೆ ಬಂದಿದ್ದ ಜೋಡಿಗಳ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ. ನಗರ ಹೊರವಲಯದ ವಾಮಂಜೂರು ಸಮೀಪದ ಪಿಲಿಕುಳ ನಿಸರ್ಗಧಾಮದಲ್ಲಿ ಯುವತಿಯೊಬ್ಬಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿರುವ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕಿನಲ್ಲಿ ವಿಹಾರಿಸಲು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅನ್ಯಕೋಮಿನ ಯುವಕರಿಬ್ಬರು ಬಂದಿದ್ದು, ಇವರನ್ನು ಬೆನ್ನಟ್ಟಿಕೊಂಡು ಬಂದ ಹಿಂದು ಸಂಘಟನೆ ಕಾರ್ಯಕರ್ತರಲ್ಲಿ ಒಬ್ಬ ಪೊಲೀಸರ ಸಮ್ಮುಖದಲ್ಲೇ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರ ಹೊರವಲಯದ ಕಾಲೇಜೊಂದರ ವಿದ್ಯಾರ್ಥಿಗಳು ಪಿಲಿಕುಳ ನಿಸರ್ಗಧಾಮದಲ್ಲಿ ವಿಹರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನು ಹಿಂಬಾಲಿಸಿಕೊಂಡು ಬಂದರಲ್ಲದೆ ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಯುವಕ – ಯುವತಿಯರು ಒಂದೇ ಕಾಲೇಜಿನವರಾಗಿದ್ದು ಪಿಲಿಕುಳದ ಮಾನಸ ವಾಟರ್ ಪಾರ್ಕಿಗೆ ಬಂದಿದ್ದರು. ವಿದ್ಯಾರ್ಥಿನಿಯೊಂದಿಗೆ ಬಂದಿದ್ದ ವಿದ್ಯಾರ್ಥಿಗಳು ಅನ್ಯಕೋಮಿನವರು ಎಂದು ನೋಡಿದ ಸ್ಥಳೀಯ ಯುವಕರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸಿದ್ದರು.

ತಕ್ಷಣ ಸ್ಥಳಕ್ಕೆ ಬಂದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಪಾರ್ಕ್ ಒಳನುಗ್ಗಿ ವಿದ್ಯಾರ್ಥಿಗಳನ್ನು ಹೊರ ಕರೆತಂದಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ನಿಸರ್ಗಧಾಮಕ್ಕೆ ಪ್ರವೇಶಿಸಿ ಜೋಡಿಯನ್ನು ವಶಕ್ಕೆ ತೆಗೆದುಕೊಳ್ಳುವ ವೇಳೆ ಸಂಘ ಪರಿವಾರದ ಕಾರ್ಯಕರ್ತನೊಬ್ಬ ಪೊಲೀಸರ ಸಮ್ಮುಖವೇ ಯುವತಿಗೆ ಹಲ್ಲೆ ನಡೆಸಿದ್ದಾನೆ. ಅನ್ಯಕೋಮಿನ ಯುವಕರು ಹಿಂದು ಯುವತಿಯರನ್ನು ಪ್ರೀತಿಯ ನೆಪದಲ್ಲಿ ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದಾರೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

ಯುವತಿಗೆ ಪೊಲೀಸರ ಎದುರೇ ಹಲ್ಲೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂಪತ್ ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

Comments are closed.