ಕರಾವಳಿ

ವಿದ್ಯಾರ್ಥಿನಿ ರೇಷ್ಮಾ ನಾಪತ್ತೆ ಪ್ರಕರಣ : ಲವ್ ಜಿಹಾದ್ ಶಂಕೆ..?: ಎನ್ಐಎ ತನಿಖೆಗೆ ಆಗ್ರಹಿಸಿ ರಕ್ಷಣಾ ಸಚಿವರಿಗೆ ಮನವಿ

Pinterest LinkedIn Tumblr

ಮಂಗಳೂರು, ಜನವರಿ 2: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಲವ್ ಜಿಹಾದ್ ಕಾರಣ ಎಂಬ ಮಾಹಿತಿ ಲಭಿಸಿದ್ದು, ಈ ಮೂಲಕ ಲವ್ ಜಿಹಾದ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡಿದೆ.

ನಗರದ ಕಾನೂನು ಪದವಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಇದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ಮಾತ್ರವಲ್ಲ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿವೆ.

ಮಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿನಿ ರೇಷ್ಮಾ ಕಳೆದ 5 ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಈಕೆ ಕೇರಳದ ಕಾಸರಗೋಡಿನ ಹಿಂದೂ ಸಂಘಟನೆಯ ಮುಖಂಡರೊಬ್ಬರ ಪುತ್ರಿಯಾಗಿದ್ದಾಳೆ. ಮುಂಬೈ ನಿವಾಸಿಯಾಗಿರುವ ಇಕ್ಬಾಲ್ ಚೌಧರಿ ಎಂಬ ಯುವಕನೊಂದಿಗೆ ರೇಷ್ಮಾ ತೆರಳಿರುವ ಶಂಕೆಯನ್ನು ಹೆತ್ತವರು ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದು ಇನ್ನೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.

ರೇಷ್ಮಾಗೆ 3 ವರ್ಷಗಳ ಹಿಂದೆ ಫೇಸ್ಬುಕ್ ನಲ್ಲಿ ಮುಂಬೈನ ಮನ್ ಖರ್ದ್ ಎಂಬಲ್ಲಿ ವಾಸಿಸುತ್ತಿರುವ ಇಕ್ಬಾಲ್ ಚೌಧರಿ ಎಂಬವನ ಪರಿಚಯವಾಗಿತ್ತು ಎನ್ನಲಾಗಿದೆ. ಈ ನಡುವೆ ಕಳೆದ 5 ತಿಂಗಳಿನಿಂದ ರೇಷ್ಮಾ ಕಾಣೆಯಾಗಿದ್ದು ಇಕ್ಬಾಲ್ ರೇಷ್ಮಾಳನ್ನು ಪುಸಲಾಯಿಸಿ ಮುಂಬೈಗೆ ಕರೆದೊಯ್ದಿದ್ದಾನೆ ಎಂದು ರೇಷ್ಮಾ ಹೆತ್ತವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎನ್ಐಎಗೆ ವಹಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳ ಮುಖಂಡರ ನಿಯೋಗವು ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಬಜರಂಗದಳ ಪ್ರಾಂತೀಯ ವಿಭಾಗದ ಸಂಚಾಲಕ ಶರಣ್ ಪಂಪ್‌ವೆಲ್, ಪ್ರಮುಖರಾದ ಗೋಪಾಲ್ ಕುತ್ತಾರ್ ಮತ್ತಿತ್ತರರು ಇದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ವೇಳೆ ಉಪಸ್ಥಿತರಿದ್ದರು.

Comments are closed.