ತಾಯ್ತನ ಎನ್ನುವುದು ಏಳುಬೀಳುಗಳಿಂದ ಕೂಡಿರುತ್ತದೆ ಮತ್ತು ಇಲ್ಲಿ ನಾವು ಎಷ್ಟು ತಿಳಿದಿದ್ದರೂ ಹೊಸತನ್ನು ತಿಳಿಯುತ್ತಲೇ ಹೋಗುತ್ತೀರಾ. ಆದರೆ ಬಹಳಷ್ಟು ಜನರು ನೀವು ತಾಯಿ ಆಗುತ್ತಿದ್ದೀರಿ ಎಂದು ತಿಳಿದೊಡನೆ “ಅಭಿನಂದನೆಗಳು” ಅಂತ ಶುರು ಮಾಡಿ “ಈಗ ನೀನು ಏನು ಮಾಡಬೇಕು ಅಂದರೆ…” ಅಂತ ಬೋಧನೆಯೊಂದಿಗೆ ಮಾತು ಮುಂದುವರೆಸುತ್ತಾರೆ. ಆದರೆ ಇಂತಹ ಬಹಳಷ್ಟು ಬೇಡದ ಸಲಹೆಗಳನ್ನ ನೀವು ನಿಮ್ಮ ಅದೇನೇ ಇರಲಿ ನನ್ನ ಮಗುವಿಗೆ ಒಳ್ಳೆಯದಾಗಲಿ ಎಂಬ ಭಾವನೆಯಿಂದ ಕುರುಡಾಗಿ ನಂಬಿ, ಪಾಲಿಸುತ್ತೀರ. ಆದರೆ ಅವುಗಳಲ್ಲಿ ಕೆಲವೊಂದು ಅನಾವಶ್ಯಕ ಮತ್ತು ವಾಸ್ತವದಲ್ಲಿ ತೊಂದರೆ ಹೆಚ್ಚಿಸುವಂತವು ಆಗಿರುತ್ತವೆ. ಅಂತಹ ಸಾಮಾನ್ಯ ತಪ್ಪು ಸಲಹೆಗಳು ಯಾವೆಂದು ನಾವಿಲ್ಲಿ ಪಟ್ಟಿ ಮಾಡಿದ್ದೇವೆ ಓದಿ :
೧. ನಿಮ್ಮ ಮಗು ಮಲಗಿದ್ದಾಗಲೆಲ್ಲಾ ನೀವೂ ಮಲಗಿ
ನೀವು ಇದರ ಬಗ್ಗೆ ಸರಿಯಾಗಿ ಯೋಚಿಸಿದರೆ, ಇದು ವಾಸ್ತವದಲ್ಲಿ ಸಾಧ್ಯವಾಗುವುದಿಲ್ಲ ಎಂಬುದು ನಿಮಗೇ ತಿಳಿಯುತ್ತದೆ. ನಿಮಗೆ ಒಂದು ಮಗುವಿದ್ದರೆ ನಿಮಗೆ ತಿಳಿದಿರುತ್ತದೆ ಅವರ ಮಲಗುವ ಸಮಯಗಳು ಬೆಂಗಳೂರಿನ ಹವಾಮಾನಕ್ಕಿಂತ ಹೆಚ್ಚು ಬದಲಾಗುತ್ತವೆ ಎಂಬುದು. ನಿಮ್ಮ ಮಗು ಮಲಗಿದ್ದಾಗ, ನಿಮಗೆ ಬೇಕಿದ್ದರೆ ಮಾತ್ರ ನೀವು ಮಲಗಬಹುದು ಅಥವಾ ಆ ಸಮಯದಲ್ಲಿ ಮಾಡದೇ ಉಳಿದುಕೊಂಡ ಕೆಲಸಗಳನ್ನ ಮಾಡಿ ಮುಗಿಸಬಹುದು ಅಥವಾ ನಿಮ್ಮ ಸ್ನೇಹಿತೆಗೆ ಕರೆ ಮಾಡಿ ಒಳ್ಳೆಯ ಸಂಭಾಷಣೆ ಹೊಂದಬಹುದು.
೨. ತಾಯ್ತನ ನೆಟ್ಟಗೆ ಮಾಡಿದರೆ ಸುಲಭದ ಕೆಲಸ
ತಾಯಿ ಆಗಿರುವುದು ಸುಲಭದ ಮಾತಲ್ಲ – ಮಗುವಿನ ಕಾಳಜಿ ಇಂದ ಹಿಡಿದು, ನಿಮ್ಮ ಸಂಸಾರವನ್ನು ಮತ್ತು ನಿಮ್ಮನ್ನು ನೀವು ನೋಡಿಕೊಳ್ಳಬೇಕು ಎಂದರೆ ಅದು ವಿಶ್ರಾಂತಿಯೇ ಇಲ್ಲದಂತಹ ಕೆಲಸ. ಯಾವಾಗಲೂ ಎಲ್ಲವೂ ಸರಿಯಾಗಿಯೇ ಇರುತ್ತದೆ ಎದು ಹೇಳಲು ಆಗುವುದಿಲ್ಲ. ಕೆಲವು ದಿನಗಳು ನಿಮಗೆ ಸಂಕಟವನ್ನ ಉಂಟುಮಾಡಿದರೆ, ಇನ್ನೂ ಕೆಲವು ದಿನಗಳು ನೀವು ತಾಯ್ತನ ಅನುಭವಿಸುತ್ತಿರುವುದಕ್ಕೆ ನಿಮ್ಮನ್ನ ನೀವು ಅದೃಷ್ಟವಂತರು ಎಂದು ಅಂದುಕೊಳ್ಳುತ್ತೀರ. ಹೀಗಾಗಿ, ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಮಗುವು ಬಾಯ್ಬಿಟ್ಟು “ಅಮ್ಮ” ಎಂದು ಮೊದಲ ಬಾರಿ ಕರೆದೊಡನೆ ನೀವು ಮಾಡಿದ ಅಷ್ಟೂ ತ್ಯಾಗವು ಸಾರ್ಥಕ ಎನಿಸುತ್ತದೆ.
೩. ಎಲ್ಲರೂ ಎದೆಹಾಲು ನೀಡುತ್ತಾರೆ, ನೀವೂ ನೀಡಬೇಕು
ಇದರ ಬಗ್ಗೆ ನೀವು ಹೆಚ್ಚಾಗಿ ಓದಿರುವುದಿಲ್ಲ ಅಥವಾ ಕೇಳಿರುವುದಿಲ್ಲ, ಆದರೆ ಬಹಳಷ್ಟು ಅಮ್ಮಂದಿರು ಎದೆಹಾಲು ನೀಡುವುದರಲ್ಲಿ ಕಷ್ಟ ಅನುಭವಿಸುತ್ತಾರೆ. ನಿಮ್ಮ ಮಗುವಿಗೆ ನಿಮಗೆ ಎದೆಹಾಲು ನೀಡಲು ಸಾಧ್ಯವಾಗದೆ ಇದ್ದರೆ, ನೀವು ಕೆಟ್ಟ ತಾಯಿ ಎಂದರ್ಥವಲ್ಲ. ಕೆಲವು ಆರೋಗ್ಯದ ಸಮಸ್ಯೆಯಿಂದ ನೀವು ಎದೆಹಾಲು ಕೊಡಲು ಸಾಧ್ಯವಾಗುತ್ತಿಲ್ಲ ಎಂದರೆ ತೊಂದರೆ ಏನಿಲ್ಲ. ಫಾರ್ಮುಲಾ ಹಾಲು ಸೇವಿಸುವ ಮಕ್ಕಳು, ಎದೆಹಾಲು ಸೇವಿಸುವ ಮಕ್ಕಳಷ್ಟೇ ಆರೋಗ್ಯಕರವಾಗಿರುತ್ತವೆ. ಹೀಗಾಗಿ ಇದರ ವಿಷಯವಾಗಿ ನಿಮ್ಮನ್ನು ನೀವು ತುಂಬಾ ದೂಷಿಸಿಕೊಳ್ಳಬೇಡಿ. ತಾಯ್ತನವನ್ನು ಅದರಲ್ಲಿನ ಶುದ್ಧ ಪ್ರೀತಿ ಮತ್ತು ಸಂತೋಷದ ಸಲುವಾಗಿ ಅನುಭವಿಸಿ ಮತ್ತು ಆನಂದಿಸಿ.
೪. ನಿಮ್ಮ ಮಗುವನ್ನ ಬಿಟ್ಟರೆ ಬೇರೇನೂ ವಿಷಯ ನಿಮ್ಮ ತಲೆಯಲ್ಲಿ ಇರಬಾರದು
ಹೌದು ನಿಮ್ಮ ಮಗುವಿನ ಮುದ್ದಾದ ಮುಖವನ್ನ ನೋಡುತ್ತಾ ಬೆಳಗ್ಗೆ ಏಳುವುದು ಒಂದು ಅದ್ಭುತ ಅನುಭವವೇ ಸರಿ, ಆದರೆ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಲು ಸ್ವಲ್ಪ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಒಂದು ವೇಳೆ ನೀವು ಸಿಸೇರಿಯನ್ನಿಗೆ ಒಳಗಾಗಿದ್ದರೆ, ಉಳಿದೆಲ್ಲವೂ ಅತ್ಯಂತ ಸೂಕ್ಷ್ಮ ವಿಷಯವೇ ಆಗಿರುತ್ತದೆ. ಮಗುವನ್ನು ನೋಡಿಕೊಳ್ಳುವ ಭರದಲ್ಲಿ ನಿಮ್ಮನ್ನು ನೀವು ಮರೆಯಬೇಡಿ. ನಿಮ್ಮ ಔಷಧಿ ಸೇವನೆ ಮತ್ತು ಕಾಳಜಿಯು ಮಗುವಿನಷ್ಟೇ ಮುಖ್ಯವಾದದ್ದು.
೫. ಹೆರಿಗೆ ಆದಮೇಲೆ ನಿಮಗೆ ಏನು ಅನಿಸುತ್ತದೋ ಅದು ಮಾಡಬಹುದು
ನೀವು ನಿಮ್ಮ ಗರ್ಭಧಾರಣೆ ಸಮಯದಲ್ಲಿ ನಿಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಶಿಸ್ತು ಮತ್ತು ಕಾಳಜಿ ವಹಿಸುತ್ತೀರ. ಹೀಗೆಂದ ಮಾತ್ರಕ್ಕೆ ನೀವು ಮಗುವಿಗೆ ಜನ್ಮ ನೀಡಿದ ಮೇಲೆ ಕೈಗೆ ಸಿಕ್ಕದ್ದನ್ನೆಲ್ಲಾ, ತೋಚಿದ್ದನ್ನೆಲ್ಲಾ ತಿನ್ನಬೇಕು ಎಂದರ್ಥವಲ್ಲ. ಸರಿಯಾದ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ನೀವು ಅಂದುಕೊಂಡಿರುವದಕ್ಕಿಂತ ವೇಗವಾಗಿ ನಿಮ್ಮ ದೇಹವನ್ನು ಬದಲಾಯಿಸುತ್ತವೆ.

Comments are closed.