ಕರ್ನಾಟಕ

ಕಿಚ್ಚಾ ಸುದೀಪ್ ಜೆಡಿಎಸ್ ಗೆ ಸೇರ್ಪಡೆ ಕುರಿತು ದೇವೇಗೌಡರು ಏನು ಹೇಳಿದರು ಗೊತ್ತಾ?

Pinterest LinkedIn Tumblr

ಮೈಸೂರು: ದಕ್ಷಿಣ ಭಾರತದ ಖ್ಯಾತ ನಟ ಕಿಚ್ಚಾ ಸುದೀಪ್ ಜಾತ್ಯಾತೀತ ಜನತಾ ದಳ ಪಕ್ಷ ಸೇರುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ ಎಂದು ವರದಿಯಾಗಿದೆ.

ಪತ್ರಿಕೆಯೊಂದು ವರದಿ ಮಾಡಿರುವಂತೆ ನಿನ್ನೆ ಮೈಸೂರಿಗೆ ಭೇಟಿ ನೀಡಿದ್ದ ದೇವೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕುಮಾರಸ್ವಾಮಿ ಹಾಗೂ ನಟ ಸುದೀಪ್ ಅವರು ಚರ್ಚೆ ಮಾಡಿದ್ದರು. ಈ ವೇಳೆ ಸುದೀಪ್ ಜೆಡಿಎಸ್ ಸೇರ್ಪಡೆ ಸಂಬಂಧ ಚರ್ಚೆ ಮಾಡಲಾಗಿದೆ. ಆದರೆ ಸುದೀಪ್ ಯಾವ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ತಿಳಿದಿಲ್ಲ. ನಾನು ಯಾರ ವ್ಯಕ್ತಿತ್ವವನ್ನೂ ಹಗುರವಾಗಿ ಕಾಣುವುದಿಲ್ಲ ಎಂದು ಹೇಳಿದರು.

ಗೋಯಲ್ ಭೇಟಿ ರಾಜಕೀಯ ದುರುದ್ದೇಶ ಇಲ್ಲ
ಅಂತೆಯೇ ಈ ಹಿಂದೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ ಕುರಿತಂತೆ ಸ್ಪಷ್ಟನೆ ನೀಡಿದ ದೇವೇಗೌಡ ಅವರು, ಗೋಯಲ್ ಭೇಟಿ ವಿಚಾರದಲ್ಲಿ ರಾಜಕೀಯ ದುರುದ್ದೇಶ ಇಲ್ಲ. ನನ್ನ ಮತ್ತು ಪಿಯೂಷ್ ಗೋಯಲ್ ಅವರ ಭೇಟಿ ಸೌಜನ್ಯದ ಭೇಟಿಯಾಗಿದೆ. ಹಾಸನದ ರೈಲ್ವೆ ಯೋಜನೆ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಿದ್ದ್ದ. ನಾನೇ ಅವರಲ್ಲಿಗೆ ಹೋಗಬೇಕಿತ್ತು. ಆದರೆ ವಯಸ್ಸಿನಲ್ಲಿ ದೊಡ್ಡವರು ಅನ್ನೋ ಕಾರಣಕ್ಕೆ ಅವರೇ ನಮ್ಮ ಮನೆಗೆ ಬಂದಿದ್ದರು. ನನ್ನ ಅವರ ಭೇಟಿಯಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

ಡೋಂಗಿತನ ಬಿಡಿ: ಸಿಎಂಗೆ ದೇವೇಗೌಡ ತಿರುಗೇಟು
ಇನ್ನು ನೀರಾವರಿ ಯೋಜನೆ ಮಾತನಾಡಿದ ದೇವೇಗೌಡ ಅವರು, ಸಿದ್ದರಾಮಯ್ಯ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದು ಕಿಡಿಕಾರಿದರು. ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ”ನೀರಾವರಿ ಯೋಜನೆಗಳ ಬಗ್ಗೆ ದೇವೇಗೌಡರು ಯಾವುದೇ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ, ಕೃಷ್ಣ ನದಿಗೆ ಯೋಜನೆಗಳನ್ನ ರೂಪಿಸಿದವರು ಯಾರು? ದೆಹಲಿಗೆ ಹೋಗಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದವರು ಯಾರು? ಸಿದ್ದರಾಮಯ್ಯನಾ? ದೇವೇಗೌಡರಾ?, ಸಿದ್ದರಾಮಯ್ಯ ಇನ್ನಾದರೂ ತಪ್ಪು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಡೋಂಗಿ ವ್ಯವಹಾರಗಳನ್ನು ಬಿಟ್ಟು ವಾಸ್ತವವಾಗಿ ಮಾತನಾಡಬೇಕು. ಹೇಳಿಕೆ ನೀಡೋದು ಸುಲಭ. ಆದರೆ ಅದನ್ನು ಅರಗಿಸಿಕೊಳ್ಳೋದು ಕಷ್ಟ. ನೀಡಿದ ಹೇಳಿಕೆ ಸತ್ಯವಾಗಿದ್ದರೆ ಮಾತ್ರ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯ ಎಂಬುದನ್ನು ಮರೆಯಬಾರದು,” ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾದರು.

ರಾಜ್ಯದ ನೆಲ, ಜಲದ ವಿಚಾರ ಬಂದಾಗ ಪಕ್ಷ ಬಿಟ್ಟು ಹೋರಾಟ
ಇದೇ ವೇಳೆ ಜಲ ವಿವಾದ ಸಂಬಂಧ ಮಾತನಾಡಿದ ದೇವೇಗೌಡ ಅವರು, ರಾಜ್ಯದ ನೆಲ, ಜಲ ವಿಚಾರ ಬಂದಾಗ ನಾನು ಪಕ್ಷ ನೋಡಿಲ್ಲ. ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದೇನೆ. ಕಾವೇರಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕರೆದಿದ್ದಕ್ಕೆ ನಾನು ಹೋಗಿರಲಿಲ್ಲವೇ. ಈಗಲೂ ಅಷ್ಟೇ, ನಾನು ಪಕ್ಷ ಬಿಟ್ಟು ಹೋರಾಟಕ್ಕೆ ಸಿದ್ಧನಿದ್ದೇನೆ, ಪ್ರಧಾನಿ ಭೇಟಿ ಮಾಡಲೂ ಕೂಡ ಸಿದ್ಧನಿದ್ದೇನೆ ಎಂದು ಹೇಳಿದರು. ಮೈಸೂರು ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಮಾಕನಾಡಿದ ಅವರು, “1962ರಲ್ಲಿ ನಾನು ಚುನಾವಣೆ ಗೆದ್ದಿದ್ದು ದೇವರ ಆಶೀರ್ವಾದಿಂದಲೇ. ನನಗೆ ದೇವರಲ್ಲಿ ಅಪಾರ ನಂಬಿಕೆ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ್ದ ಹೋರಾಟ ಮಾಡಲು ಇರೋ ಶಕ್ತಿಯೇ ದೇವರು. ಈ ಹಿನ್ನೆಲೆಯಲ್ಲಿ ಇಂದು ವೈಕುಂಠ ಏಕಾದಶಿಯ ವಿಶೇಷ ಪೂಜೆ ಕೈಗೊಂಡಿದ್ದೇನೆ. ಆದಿ ರಂಗ, ಮಧ್ಯರಂಗ, ಅಂತ್ಯರಂಗನ ದರ್ಶನ ಪಡೆದು ಪುಣ್ಯಪ್ರಾಪ್ತಿ ಆಗುತ್ತದೆಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಮೂರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇವೆ. ದೇವರ ದರ್ಶನ ಪಡೆದು ಮತ್ತೆ ವಾಪಸ್ ಆಗುತ್ತೇವೆ ಎಂದರು.

Comments are closed.