ಕರಾವಳಿ

ಪಿಲಿಕುಲದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೊದಲ 3ಡಿ ತಾರಾಲಯ ಫೆಬ್ರವರಿ ಮೊದಲ ವಾರದಲ್ಲಿ ಲೋಕಾರ್ಪಣೆ : ಸಚಿವ ಎಂ.ಆರ್.ಸೀತಾರಾಮ್

Pinterest LinkedIn Tumblr

ಮಂಗಳೂರು, ಡಿಸೆಂಬರ್.22: ಮಂಗಳೂರಿನ ಪಿಲಿಕುಲದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೊದಲ 3ಡಿ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯದ ಕಾಮಗಾರಿಯನ್ನು ಗುರುವಾರ ರಾಜ್ಯ ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಅವರು ಪರಿಶೀಲನೆ ನಡೆಸಿದರು.

ತಾರಾಲಯದ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಂ.ಆರ್.ಸೀತಾರಾಮ್ ಅವರು, ದೇಶದ ಮೊದಲ 3ಡಿ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯದ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದ್ದು, ಜನವರಿ ಅಂತ್ಯದೊಳಗೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಿಂದ ತಾರಾಲಯ ನಿರ್ಮಾಣವಾಗುತ್ತಿದೆ. 2011ರಲ್ಲಿ ಶಂಕುಸ್ಥಾಪನೆಗೊಂಡು ಇದೀಗ ಉದ್ಘಾಟನೆಯ ಹಂತಕ್ಕೆ ಬಂದಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಚಿವರು ಹೇಳಿದರು.

ದೇಶದಲ್ಲೇ ಪ್ರಪ್ರಥಮವಾಗಿ ಆಕ್ಟಿವ್ 3ಡಿ 8ಕೆ ಪ್ರೊಜೆಕ್ಷನ್ ಸಿಸ್ಟಮ್‍ನೊಂದಿಗೆ ತಾರಾಲಯ ನಿರ್ಮಾಣವಾಗುತ್ತಿದೆ. ಈ ತಾರಾಲಯ ಅಂತಾರಾಷ್ಟ್ರೀಯ ತಾರಾಲಯಗಳ ಪೈಕಿ 21ನೇ ಸ್ಥಾನದಲ್ಲಿದೆ. ತಾರಾಲಯದ ಡೋಮ್‍ನೊಳಗೆ ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸೀಮ್ ಫ್ಯಾಬ್ರಿಕೇಶನ್ ಅಳವಡಿಕೆ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ. ನ್ಯಾನೋಸೀಮ್ ಫ್ಯಾಬ್ರಿಕೇಶನ್ ಮತ್ತು ಅಳವಡಿಕೆಯನ್ನು ಅಮೆರಿಕಾದಿಂದ ಬಂದಿರುವ ಮೂವರು ಪರಿಣತರೊಂದಿಗೆ ಮಹಾರಾಷ್ಟ್ರದ ನಾಶಿಕ್‍ನ ಹಲವಾರು ತಾಂತ್ರಿಕರ ಜೊತೆಗೂಡಿ ಕೆಲಸ ಸಾಗುತ್ತಿದೆ ಎಂದವರು ಹೇಳಿದರು.

ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿಪಂ ಸದಸ್ಯ ಇಬ್ರಾಹೀಂ ಅಡ್ಡೂರು, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು

Comments are closed.