ಕರಾವಳಿ

ಅಂಬೇಡ್ಕರ್ ತತ್ವ ಪಾಲನೆ, ಒಗ್ಗಟ್ಟಿನ ಹೋರಾಟದಿಂದ ಯಶಸ್ಸು ಸಾಧ್ಯ: ಉದಯ್ ಕುಮಾರ್ ತಲ್ಲೂರು

Pinterest LinkedIn Tumblr

ಕುಂದಾಪುರ: ದಲಿತರ ಚಳುವಳಿ ಹೋರಾಟದತ್ತ ಹೋಗಬೇಕು, ದಲಿತರು ಇನ್ನಷ್ಟು ರಾಜಕೀಯಕ್ಕೆ, ಅಧಿಕಾರಕ್ಕೆ ಬರುವ ಮೂಲಕ ನಮ್ಮ ಹಕ್ಕನ್ನು ಪಡೆಯುವಂತಾಗಬೇಕು. ಭೂಮಿ ಹಕ್ಕು, ಸಮಾನತೆ ಹಕ್ಕು, ಆರೋಗ್ಯದ ಹಕ್ಕನ್ನು ಪಡೆಯಲು ಒಗ್ಗಟ್ಟಿನ ಹೋರಾಟ ಅಗತ್ಯ. ಸಮಾನತೆ, ಸಮಬಾಳು, ಸಮಪಾಲು ಪಡೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಅನುಸರಿಸುವ ಮೂಲಕ ಪಡೆಯಬಹುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಹೇಳಿದರು.

ಅವರು ಬುಧವಾರದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭಿಮಘರ್ಜನೆ ಕುಂದಾಪುರ ತಾಲ್ಲೂಕು ಶಾಖೆಯ ವತಿಯಿಂದ ಮೂಡ್ಲಕಟ್ಟೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಡಾ. ಬಿ.ಆರ್.ಅಂಬೇಡ್ಕರ್‌ರವರ 61ನೇ ಪರಿನಿಬ್ಬಾಣ ದಿನ ಹಾಗೂ ಮೂಢನಂಬಿಕೆ ಆಚರಣೆ ವಿರುದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಲಿತರನ್ನು, ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸುವ ಹಾಗೂ ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು. ಪ್ರತಿ ಮನೆಯಲ್ಲಿಯೂ ಅಂಬೇಡ್ಕರ್ ಕ್ರಾಂತಿಯಾದಾಗ ಮಾತ್ರವೇ ಪ್ರಬುದ್ಧವಾದ ಶಕ್ತಿ ಹೊಂದಿ ದಕ್ಕಬೇಕಾದ ಹಕ್ಕು ಪಡೆಯಲು ಸಾಧ್ಯವಿದೆ. ಸಮಾಜದಲ್ಲಿ ತುಳಿತಕ್ಕೆ ಶೋಷಣೆಗೆ ಒಳಗಾದವರೆಲ್ಲರೂ ದಲಿತರೇ ಆಗಿದ್ದು ಅವರೆಲ್ಲರೂ ಒಂದಾಗಬೇಕು. ನಾನು ಎನ್ನುವ ಹಮ್ಮುಬಿಮ್ಮು ಬಿಟ್ಟು ನಾವು, ನಮ್ಮದು ಎನ್ನುವ ಹೃದಯ ವೈಶಾಲ್ಯತೆ ಹೊಂದಬೇಕು. ಹೋರಾಟಕ್ಕೆ ಕಾಲಿಟ್ಟ ಮೇಲೆ ಹಿಂದೆ ಸರಿಯುವುದು ಸರಿಯುವ ಪ್ರಶ್ನೆ ಇರಬಾರದು ಎಂದು ಕರೆಕೊಟ್ಟರು.

ದ.ಸಂ.ಸ ಭೀಮಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಗ್ರಾಮ ಶಾಖೆಯ ಸಂಚಾಲಕ ಶಂಕರ್, ಬಾಬು ಉಳ್ಳೂರು, ಈಶ್ವರ, ಮಹಿಳಾ ಘಟಕದ ಸಂಚಾಲಕಿ ಗಿರಿಜಾ ಮತ್ತಿತರು ಉಪಸ್ಥಿತರಿದ್ದರು.

ಚಂದ್ರ ಅಲ್ತಾರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ದಲಿತರ ಹೋರಾಟವನ್ನು ಹತ್ತಿಕ್ಕುವ ಕುತಂತ್ರವನ್ನು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ದಪ್ಪ ಚರ್ಮದ ಅಧಿಕಾರಿಗಳಿಂದ ಶೋಷಿತರಿಗೆ ನ್ಯಾಯ ಒದಗಿಸುವ ಕಾರ್ಯವಾಗುತ್ತಿಲ್ಲ. ಕಾರ್ಯಾಂಗ ಹಾಗೂ ಶಾಸಕಾಂಗ ನಮ್ಮ ಪರವಾಗಿಲ್ಲ ಎನ್ನುವುದು ದುರದೃಷ್ಟಕರ. ಇಂತಹ ಷಡ್ಯಂತ್ರವನ್ನು ಹತ್ತಿಕ್ಕುವಲ್ಲಿ ನಾವು ಇನ್ನಷ್ಟು ಪ್ರಬಲರಾಗಬೇಕು.
– ಉದಯ್ ಕುಮಾರ್ ತಲ್ಲೂರು (ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯ ಸಂಚಾಲಕ )

Comments are closed.