ಅಂತರಾಷ್ಟ್ರೀಯ

ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ವಂಚಿಸಿದ್ದಕ್ಕೆ ಯಾವುದೇ ಸಾಕ್ಷ್ಯ ಇಲ್ಲ: ಮಲ್ಯ ಪರ ವಕೀಲೆ ವಾದ

Pinterest LinkedIn Tumblr

ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಬ್ಯಾಂಕ್ ಗಳಿಗೆ ವಂಚಿಸಿದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅವರ ವಕೀಲರು ಬುಧವಾರ ಲಂಡನ್ ಕೋರ್ಟ್ ನಲ್ಲಿ ವಾದಿಸಿದ್ದಾರೆ.

ವಂಚನೆ ಹಾಗೂ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಅವರು ಇಂದು ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನದ ವಿಚಾರಣೆಗೆ ವಕೀಲೆ ಕ್ಲೇರ್‌ ಮಾಂಟ್‌ಗೋಮರಿ ನೇತೃತ್ವದ ತಮ್ಮ ವಕೀಲರ ತಂಡದೊಂದಿಗೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿದ್ದರು.

ವಿಜಯ್ ಮಲ್ಯ ಅವರ ವಿರುದ್ಧದ ವಂಚನೆ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಮಾಂಟ್‌ಗೋಮರಿ ಅವರು ವಾದಿಸಿದ್ದಾರೆ.

ಭಾರತ ಸರ್ಕಾರದ ಆದೇಶದಂತೆ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್) ನೀಡಿದ ಸಾಕ್ಷ್ಯಗಳಲ್ಲಿ ಯಾವುದೇ ಹುರುಳಿಲ್ಲ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ ನಷ್ಟದ ಕಾರಣ ಸಾಲ ಮರುಪಾವತಿಸಲು ನಮ್ಮ ಕಕ್ಷಿದಾರರಿಗೆ ಸಾಧ್ಯವಾಗಿಲ್ಲ. ಅವರಿಗೆ ಮೋಸ ಮಾಡುವ ಉದ್ದೇಶ ಇಲ್ಲ ಎಂದು ಕ್ಲೇರ್‌ ಅವರು ಬ್ಯಾಂಕ್‌ ವಹಿವಾಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಮೊದಲ ದಿನದ ವಿಚಾರಣೆಯಲ್ಲಿ ಭಾರತ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸಿಪಿಎಸ್, ವಿಜಯ್ ಮಲ್ಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದಕ್ಕೆ ಅವರು ಉತ್ತರ ನೀಡಬೇಕಿದೆ ಎಂದು ಹೇಳಿತ್ತು.

ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ 8 ದಿನಗಳ ವಿಚಾರಣೆ ಆರಂಭವಾಗಿದ್ದು, ಮಲ್ಯ ಅವರು ಕೋರ್ಟಿಗೆ ಹಾಜರಾಗಿದ್ದರು.

ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಡಿಸೆಂಬರ್ 4ರಿಂದ ಡಿಸೆಂಬರ್ 14ರ ವರೆಗೆ ವಿಚಾರಣೆ ನಡೆಯಲಿದ್ದು, ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಲಿದೆ.

ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಯುತ್ತಿದೆ.

9 ಸಾವಿರ ಕೋಟಿ ರುಪಾಯಿ ಸಾಲ ಮಾಡಿಕೊಂಡು ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್ ಗಳಿಂದ ಹಲವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇದೀಗ ಮಲ್ಯ ಅವರನ್ನು ದೇಶಕ್ಕೆ ಕರೆತರುವ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

Comments are closed.