ಕರಾವಳಿ

ನಾಳೆ ಮಂಗಳೂರಿನ ಬಂಗ್ರ ಕೂಳೂರಿನಲ್ಲಿ ಪ್ರಥಮ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ

Pinterest LinkedIn Tumblr

ಮಂಗಳೂರು,ಡಿಸೆಂಬರ್.2: ಮಂಗಳೂರು ಕಂಬಳ ಸಮಿತಿ ವತಿಯಿಂದ ಮೊದಲ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳವು ಡಿ.3ರಂದು ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿಯಲ್ಲಿ ಜರಗಲಿದೆ ಎಂದು ಸಮಿತಿಯ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಕದ್ರಿಯ ಕಂಬಳ ನಿಂತ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಮಂಗಳೂರು ಕಂಬಳೋತ್ಸವವಾಗಿ ಆಚರಿಸಲ್ಪಡುತ್ತದೆ. ಪ್ರಸ್ತುತ ಮಂಗಳೂರು ಕಂಬಳಕ್ಕಾಗಿ ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಕರೆಯನ್ನು ನಿರ್ಮಿಸಲಾಗಿದೆ ಎಂದರು.

ಕಂಬಳವನ್ನು ಡಿ.3ರಂದು ಬೆಳಗ್ಗೆ 9:30ಕ್ಕೆ ನಿಟ್ಟೆ ವಿವಿಯ ಕುಲಾಧಿಪತಿ ಎನ್.ವಿನಯ ಹೆಗ್ಡೆ ಉದ್ಘಾಟಿಸಲಿದ್ದು, ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್ಜಿ ಗ್ರೂಪ್ನ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ ನೂತನ ಜೋಡುಕರೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಎಸ್.ಅಂಗಾರ, ಕ್ಯಾ. ಗಣೇಶ್ ಕಾರ್ಣಿಕ್, ಐವನ್ ಡಿಸೋಜಾ, ಕೋಟ ಶ್ರೀನಿವಾಸ ಪೂಜಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 6:30ಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ವಿ.ಸುನೀಲ್ ಕುಮಾರ್, ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ.

ಈ ಸಭಾ ಕಾರ್ಯಕ್ರಮದಲ್ಲಿ ಕಂಬಳ ಪುನರಾರಂಭಗೊಳ್ಳಲು ಶ್ರಮಿಸಿದ ಪ್ರಮುಖರಿಗೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ಜಯಕರ ಮಡಿವಾಳ ನಕ್ರೆ, ಬಾರಾಡಿಬೀಡು ಡಾ. ಜೀವಂಧರ್ ಬಲ್ಲಾಳ್, ಕೊಳಕ್ಕೆ ಇರ್ವತ್ತೂರು ಆನಂದ ಅವರಿಗೆ ಸನ್ಮಾನ ಇರುತ್ತದೆ ಎಂದು ಬ್ರಿಜೇಶ್ ಚೌಟ ವಿವರಿಸಿದರು.

6 ವಿಭಾಗಗಳಲ್ಲಿ ಸ್ಪರ್ಧೆ:

ನೇಗಿಲು ಕಿರಿಯ ವಿಭಾಗ, ಹಗ್ಗ ಕಿರಿಯ, ನೇಗಿಲು ಹಿರಿಯ ವಿಭಾಗ, ಹಗ್ಗ ಹಿರಿಯ, ಕನೆ ಹಲಗೆ ಮತ್ತು ಅಡ್ಡ ಹಲಗೆ ಹೀಗೆ 6 ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ. ವಿಜೇತರಿಗೆ ಪ್ರಥಮ, ದ್ವಿತೀಯ ಚಿನ್ನ, ಇತರ ಬಹುಮಾನಗಳಿರುತ್ತದೆ. ವಿಡಿಯೋ ಚಿತ್ರೀಕರಣ, ವಿಡಿಯೋ ದಾಖಲೀಕರಣ ಹೀಗೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಡಿ. 4ರಂದು ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಅತಿಥಿಗಳಾಗಿ ಶಾಸಕ ಸಿ.ಟಿ.ರವಿ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಕಂಬಳ ಸಮಿತಿಯ ಪ್ರಮುಖರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ವಿಜಯಕುಮಾರ್ ಕಂಗಿನಮನೆ, ನಿತಿನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ ಶೆಡ್ಡೆ, ಕಿಶೋರ್ ಕುಮಾರ್ ಪುತ್ತೂರು, ತಲಪಾಡಿ ದೊಡ್ಡಮನೆ ಪ್ರೀತಮ್ ರೈ,ಉಳ್ಳಾಲ ನಂದನ್ ಮಲ್ಯ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.