ಕರಾವಳಿ

ಟಿಪ್ಪರ್‌ನವರಿಗೆ ಪೊಲೀಸರು ಮಾಡ್ತಿದ್ದಾರಂತೆ ಕಿರಿಕ್: ಟಿಪ್ಪರ್ ಮಾಲೀಕರಿಂದ ಆರೋಪ

Pinterest LinkedIn Tumblr

ಕುಂದಾಪುರ: ತಾಲೂಕಿನಾದ್ಯಂತ ಸುಮಾರು 500 ಕ್ಕೂ ಅಧಿಕ ಟಿಪ್ಪರ್ ಲಾರಿಗಳು ಸರಕು ಸಾಗಣಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇತ್ತೀಚಿನ ಒಂದೂವರೆ ವರ್ಷಗಳಿಂದ ಪೊಲೀಸ್ ಇಲಾಖೆ ಹಾಗೂ ಇತರೆ ಸರಕಾರಿ ಇಲಾಖೆಯವರು ಟಿಪ್ಪರ್ ಅಡ್ಡಗಟ್ಟಿ ಸುಖಾಸುಮ್ಮನೆ ದಂಡ ವಿಧಿಸುವುದು, ಜೈಲಿಗಟ್ಟುವುದು ಸೇರಿದಂತೆ ಹಿಂಸೆ ನೀಡುತ್ತಿದ್ದಾರೆಂದು ಕುಂದಾಪುರ ಟಿಪ್ಪರ್ ಮಾಲಕರ ಸಂಘದವರು ಪತ್ರಿಕಾಗೋಷ್ಟಿ ನಡೆಸಿ ಆರೋಪ ಮಾಡಿದ್ದಾರೆ.

ಸಂಘದ ಅಧ್ಯಕ್ಷ ಗುಣಕರ ಶೆಟ್ಟಿ ಕಟ್ಕೆರಿ, ಗೌರವಾಧ್ಯಕ್ಷ ರಮೇಶ್ ಕುಂದರ್, ಗೌರವ ಸಂಚಾಲಕ ಶರತ್ ಶೆಟ್ಟಿ ಬಾಳೆಕೆರೆ, ಸಲಹೆಗಾರ ಉದಯ ಕುಮಾರ್ ಶೆಟ್ಟಿ ಈ ಸಂದರ್ಭ ಮಾತನಾಡಿ, ಟಿಪ್ಪರ್ ಲಾರಿ ವ್ಯವಹಾರಕ್ಕೆ ಸಂಬಂದಪಟ್ಟಂತೆ ಸರಕಾರಿ ಅಧಿಕಾರಿಗಳಿಂದ ಅನಗತ್ಯ ಕಿರುಕುಳ ನಿಲ್ಲಬೇಕು, ಕಾರ್ಮಿಕರು ಮತ್ತು ಚಾಲಕರಿಗೆ ಕಿರುಕುಳ ನೀಡಬಾರದು. ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡುವ ಸರಕು ಹಾಗೂ ಸಾಮಾಗ್ರಿಗಳಿಗೆ ಆಯಾಯ ಸ್ಥಳದಲ್ಲಿಯೇ ರಾಜಧನ ನಿಗದಿಪಡಿಸಿ ಬಳಿಕ ಸಾಗಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕೋಟೇಶ್ವರದಿಂದ ಹೆಮ್ಮಾಡಿ ತನಕ ಕುಂದಾಪುರ ಪೊಲೀಸರು ಐದಾರು ಕಡೆ ಟಿಪ್ಪರ್ ವಾಹನ ಅಡ್ಡಗಟ್ಟಿ ಯಾವುದೋ ನೆಪವೊಡ್ಡಿ ದಂಡ ವಿಧಿಸುತ್ತಿದ್ದು ಇದು ನಿಲ್ಲಬೇಕು. ಈ ಬಗ್ಗೆ ಸಂಬಂದಪಟ್ಟ ಜನಪ್ರತಿನಿಧಿಗಳು ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಮುಂದಿನ ಎರಡು ವಾರಗಳೊಳಗಾಗಿ ಈ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತೇವೆಂದು ಎಚ್ಚರಿಸಿದ್ದಾರೆ.

ಕಂಡಕಂಡಲ್ಲಿ ದಂಡ?!
ಕೋಟೇಶ್ವರದಿಂದ ಹೆಮ್ಮಾಡಿಯವರೆಗೂ ಸುಮಾರು ಐದಾರು ಕಡೆಗಳಲ್ಲಿ ಪೊಲೀಸರು ಟಿಪ್ಪರ್ ಅಡ್ಡಗಟ್ಟಿ ದಂಡ ವಿಧಿಸುತ್ತಾರೆ. ಒಂದೆಡೆ ಟ್ರಾಫಿಕ್ ಪೊಲೀಸರು, ಇಂಟರ್ ಸೆಪ್ಟರ್, ಹೈವೇ ಫ್ಯಾಟ್ರೋಲ್ ಸೇರಿದಂತೆ ಹಲವು ವ್ಯವಸ್ಥೆಯಲ್ಲಿ ಪೊಲೀಸರು ಟಿಪ್ಪರ್ ಅಡ್ಡಗಟ್ಟುತ್ತಾರೆ. ದೊಡ್ಡದೊಡ್ಡ ಕಾಮಗಾರಿಗಳಿಗೆ ಸರಕು ಸಾಗಿಸುವ ಇತರೇ ವಾಹನಗಳಿಗೆ ಇವರು ಯಾವುದೇ ದಂಡ ವಿಧಿಸುವುದಿಲ್ಲ. ಯಾಕೆಂದರೇ ಅವರೆಲ್ಲಾ ಪ್ರತಿ ತಿಂಗಳು ಇಲಾಖೆಗೆ ‘ಮಾಮೂಲಿ’ ನೀಡ್ತಾರೆ ಎಂದು ಸಂಘದವರು ಗಂಭೀರ ಆರೋಪ ಮಾಡಿದ್ದಾರೆ.

 

 

Comments are closed.