ಕರಾವಳಿ

ಉಳ್ಳಾಲ ಟಾರ್ಗೆಟ್ ಗ್ರೂಪ್‌ನ ಮುಖಂಡ ಹಾಗೂ ಸಹಚರನ ಬಂಧನ

Pinterest LinkedIn Tumblr

ಮಂಗಳೂರು, ನವೆಂಬರ್. 23: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, ಪೊಲೀಸರಿಗೆ ಬೇಕಾಗಿದ್ದ ಉಳ್ಳಾಲ ಟಾರ್ಗೆಟ್ ಗ್ರೂಪ್‌ನ ಮುಖಂಡ ಹಾಗೂ ಅತನ ಸಹಚರನನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಳ್ಳಾಲ ಸುಂದರಿಬಾಗ್‌ನ ನಿವಾಸಿ ಇಲ್ಯಾಸ್ ಯಾನೆ ಟಾರ್ಗೆಟ್ ಇಲ್ಯಾಸ್ ಮತ್ತು ಉಳ್ಳಾಲದ ಮೇಲಂಗಡಿ ದರ್ಗಾ ನಿವಾಸಿ ಸುಮೋ ಇಮ್ರಾನ್ ಯಾನೆ ಇಮ್ರಾನ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಲ್ಲಿ ಇಲ್ಯಾಸ್ ಯಾನೆ ಟಾರ್ಗೆಟ್ ಇಲ್ಯಾಸ್ ಟಾರ್ಗೆಟ್ ಗ್ರೂಪ್‌ನ ಮುಖಂಡನಾಗಿದ್ದು, ಇಮ್ರಾನ್ ಆತನ ಸಹಚರ ಎನ್ನಲಾಗಿದೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದ ಜಪ್ಪು ಕೊಡ್ಪಾಡಿ ಬಳಿಯ ಫ್ಲಾಟ್ ಒಂದರಲ್ಲಿ ಇಲ್ಯಾಸ್ ವಾಸವಾಗಿರುವ ಬಗ್ಗೆ ದೊರೆತ ಮಾಹಿತಿಯಂತೆ ರೌಡಿ ನಿಗ್ರಹದಳದ ಸಿಬ್ಬಂದಿ ದಾಳಿ ಮಾಡಿ ಇಲ್ಯಾಸ್ನನ್ನು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಈತನು ಉಳ್ಳಾಲದಲ್ಲಿ ದಾವೂದ್ ಎಂಬಾತನನ್ನು ತನ್ನ ಸಹಚರರೊಂದಿಗೆ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಂತರ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. ಈತನ ವಿರುದ್ಧ ಬಜ್ಪೆ, ಕೊಣಾಜೆ ಹಾಗೂ ಉತ್ತರ ಕನ್ನಡದ ಯಲ್ಲಾಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು 4 ವಾರಂಟ್ಗಳಿದ್ದು, ನ್ಯಾಯಲಯಾಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ, ಉಡುಪಿ ಜಿಲ್ಲೆಯ ಪಡುಬಿದ್ರೆ, ಉತ್ತರಕನ್ನಡದ ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ದರೋಡೆಗೆ ಯತ್ನ ಮೊದಲಾದ ಸುಮಾರು 25 ಪ್ರಕರಣಗಳು ದಾಖಲಾಗಿವೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಮುಂಬೈ ನಗರದ ದಾದರ್ ರೈಲ್ವೆ ನಿಲ್ದಾಣದ ಬಳಿ ಇರುವ ಲಾಡ್ಜ್ನಲ್ಲಿ ಸುಮೋ ಇಮ್ರಾನ್  ವಾಸವಾಗಿರುವ ಬಗ್ಗೆ ದೊರೆತ ಮಾಹಿತಿಯಂತೆ ರೌಡಿ ನಿಗ್ರಹದಳದ ಸಿಬ್ಬಂದಿ ದಾಳಿ ಮಾಡಿ ಸುಮೋ ಇಮ್ರಾನ್ನನ್ನು ನ. 19ರಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈತ ಉಳ್ಳಾಲದಲ್ಲಿ ದಾವೂದ್ ಎಂಬಾತನನ್ನು ತನ್ನ ಸಹಚರರೊಂದಿಗೆ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಬಜ್ಪೆ ಉಳ್ಳಾಲ ಮತ್ತು ಯಲ್ಲಾಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು 3 ವಾರಂಟ್ಗಳಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ತಲೆ ಮರೆಸಿಕೊಂಡಿದ್ದ. ಈತನ ವಿರುದ್ಧ ನಗರದ ಉಳ್ಳಾಲ, ಬಜ್ಪೆ ಮತ್ತು ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ದರೋಡೆಗೆ ಯತ್ನ ಮೊದಲಾದ ಸುಮಾರು 9 ಪ್ರಕರಣಗಳು ದಾಖಲಾಗಿವೆ.

ಆರೋಪಿಗಳನ್ನು ಮುಂದಿನ ಕ್ರಮಕ್ಕೆ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರ ನಿರ್ದೇಶನದಂತೆ, ಡಿಸಿಪಿ ಗಳಾದ ಹನುಮಂತರಾಯ (ಕಾನೂನು ಮತ್ತು ಸುವ್ಯವಸ್ಥೆ), ಉಮಾ ಪ್ರಶಾಂತ್ (ಅಪರಾಧ ಮತ್ತು ಸಂಚಾರ ವಿಭಾಗ) ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.