ಕರಾವಳಿ

ಜನರನ್ನು ಮುನ್ನಡೆಬೇಕಾದ ಮಾಧ್ಯಮ ಇಂದು ಹಿನ್ನಡೆಸುವ, ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಬೇಸರದ ಸಂಗತಿ :ಡಾ.ಜಿ.ಪಿ.ಶಿವರಾಂ

Pinterest LinkedIn Tumblr

ಮಂಗಳೂರು, ನವೆಂಬರ್.22: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಮತ್ತು ಸಂದೇಶ ಪ್ರತಿಷ್ಠಾನ ಮಂಗಳೂರು ಜಂಟಿ ಆಶ್ರಯದಲ್ಲಿ ‘ಮಾಧ್ಯಮಗಳಿಗೆ ಬೇಕೇ ಲಗಾಮು?’ ಸಂವಾದಗೋಷ್ಠಿ ಮಂಗಳವಾರ ನಂತೂರು-ಬಜ್ಜೋಡಿ ಬಳಿಯ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಿತು.

ಸಂವಾದಗೋಷ್ಠಿಯನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಪ್ರಾಧ್ಯಾಪರ ಡಾ. ಜಿ.ಪಿ. ಶಿವರಾಂ ಅವರು ಮಾತನಾಡಿ, ಮಾಧ್ಯಮಗಳ ತನಿಖಾ ವರದಿಗಳು ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿರುವುದು ಮಾತ್ರವಲ್ಲದೆ, ತಾವು ನಡೆದದ್ದೇ ದಾರಿ ಎಂಬ ನೆಲೆಯಲ್ಲಿ ಸಾರ್ವಜನಿಕ ಕಳಕಳಿಯ ಸೇವೆ ಉದ್ದಿಮೆಯಾಗಿ ಪರಿವರ್ತನೆಯಾಗುತ್ತಿವೆ ಎಂದು ಹೇಳಿದರು.

ಪತ್ರಿಕೋದ್ಯಮ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ನಿಕಟ ನಂಟಿದೆ. ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಮಾಧ್ಯಮ ಜನರನ್ನು ಮುನ್ನಡೆಸುವುದು ಮಾತ್ರವಲ್ಲದೆ, ಹಿನ್ನಡೆಸುವ, ದಾರಿ ತಪ್ಪಿಸುವ ಕಾರ್ಯವನ್ನೂ ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿ.ಮಾಧ್ಯಮಗಳಿಂದು ಸಾಕಷ್ಟು ಅವಕಾಶಗಳ ಹೊರತಾಗಿಯೂ, ತಾವು ಮಾಡಿದ್ದೇ ಸರಿ ಎಂಬ ದಾರಿಯಲ್ಲಿ ಸಾಗುತ್ತಿರುವ ಮಾಧ್ಯಮಗಳಿಗೆ ನಿಯಂತ್ರಣ ಹೇರುವುದು ಯಾರು ಎಂಬುದು ಮಾತ್ರ ಪ್ರ್ನೆಯಾಗಿದೆ ಎಂದು ಅವರು ಹೇಳಿದರು.

ದೇಶದ ಸಾರ್ವಭೌಮತೆ, ಸುರಕ್ಷತೆ ಹಾಗೂ ಜನರ ನಡುವೆ ಸೌಹಾರ್ದತೆಯನ್ನು ಕಾಪಾಡುವ ಮೂಲಕ ನಿಖರವಾದ ಸುದ್ದಿಯನ್ನು ತಲುಪಿಸಬೇಕಾದ ಮಾಧ್ಯಮಗಳಿಂದು ನೀತಿ ಸಂಹಿತೆಗಳನ್ನು ಮೀರಿ ಕಾರ್ಯ ನಿರ್ವಹಿಸುವ ಸಂದರ್ಭಗಳೂ ನಮ್ಮೆದುರಿಗಿದೆ. ಇತರರಿಗೆ ಬೆಟ್ಟು ಮಾಡಿ ಕಾರ್ಯ ನಿರ್ವಹಿಸುವ ಬದಲು ಮಾಧ್ಯಮಗಳು ತಮ್ಮ ಜವಾಬ್ಧಾರಿಯನ್ನು ಅರಿತು ಸಾಮಾಜಿಕ ಕಳಕಳಿಯೊಂದಿಗೆ ಜವಾಬ್ಧಾರಿಯುತವಾಗಿ ಕಾರ್ಯ ನಿರ್ವಹಿಸುವ ಅಗತ್ಯ ಅತೀ ಅಧಿಕವಾಗಿದೆ ಎಂದು ಅವರು ಹೇಳಿದರು.

ಬಳಿಕ ನಡೆದ ಸಂವಾದ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಪತ್ರಕರ್ತ ಬಾಲಕೃಷ್ಣ ಹೊಳ್ಳ, ಮಾಧ್ಯಮ ಚಿಂತಕ ಫಾ. ರಿಚರ್ಡ್ ಡಿಸೋಜ, ಸಾಮಾಜಿಕ ಹೋರಾಟಗಾರ ದಿನೇಶ್ ಹೊಳ್ಳ, ವಕೀಲ ಸಂತೋಷ್ ಪೀಟರ್ ಡಿಸೋಜ, ಮಾಮ್ ಗೌರವಾಧ್ಯ್ಷ ವೇಣು ಶರ್ಮಾ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ವಿಕ್ಟರ್ ವಿಜಯ್ ವಹಿಸಿದ್ದರು. ಪತ್ರಕರ್ತ ವೇಣು ವಿನೋದ್ ಸ್ವಾಗತಿಸಿದರು. ಉಪನ್ಯಾಸಕಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

VB

Comments are closed.