ಕರಾವಳಿ

ಸಮಾನ ನ್ಯಾಯ ವ್ಯವಸ್ಥೆ ಸಂವಿಧಾನದ ಆಶಯ- ಲೋಕಾಯುಕ್ತ

Pinterest LinkedIn Tumblr

ಉಡುಪಿ: ಕಾನೂನು ನೆರವು ಪ್ರಾಧಿಕಾರಕ್ಕೆ ಅಪರಾಧಿಗಳಿಗೆ ಶಿಕ್ಷೆ ನೀಡುವ ಅಧಿಕಾರವಿಲ್ಲದಿದ್ದರೂ , ಆರೋಪ ಅಥವಾ ಅಪರಾಧಿಗಳ ಬಗ್ಗೆ ಲೋಕಾಯುಕ್ತದ ಮುಖಾಂತರ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯ ಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಡೆದ ‘ಸೇವೆಗಾಗಿ ಸಂಪರ್ಕ’ ಕಾನೂನು ಮಾಹಿತಿ ಜಾಗೃತಿ ಆಂದೋಲನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಕಾನೂನಿನ ನೆರವು ದೊರಕಿಸುವ ಉದ್ದೇಶವನ್ನಿಟ್ಟುಕೊಂಡು ಆರಂಭವಾದ ಉಚಿತ ಕಾನೂನು ಸೇವೆ ಸಮಾನ ಹಕ್ಕು ನ್ಯಾಯದಾನದ ಭರವಸೆಯನ್ನು ಎಲ್ಲರಿಗೂ ನೀಡುತ್ತಿದೆ. ಕಾನೂನು ಪ್ರಾಧಿಕಾರದ ನೆರವನ್ನು ಅರ್ಹರು ಪಡೆಯುವಂತಾಗಬೇಕೆಂದು ಅವರು ಹೇಳಿದರು.

ವಕೀಲ ವೃತ್ತಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದ್ದು, ಅದನ್ನು ವಕೀಲರು ಸಾಮಾಜಿಕ ಪರಿವರ್ತನೆ ಹಾಗೂ ಏಳಿಗೆಗೆ ಬಳಸಿಕೊಳ್ಳಲು ಅವಕಾಶವಿದೆ. ದೇಶದ ಸ್ವಾತಂತ್ರಕ್ಕಾಗಿ ಸಾಕಷ್ಟು ವಕೀಲರು ಬಲಿದಾನ ಮಾಡಿದ್ದಾರೆ ಮತ್ತು ಜೈಲಿಗೆ ಹೋದ ಚರಿತ್ರೆ ನಮ್ಮ ದೇಶದ್ದು. ವ್ಯವಸ್ಥೆಯು ಇಂದು ಮಲಿನಗೊಂಡಿದ್ದು, ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನೇ ಹೊಣೆ ಮಾಡದೆ ಎಲ್ಲರೂ ಸೇರಿ ಸಮಾಜದ ಸ್ವಾಸ್ಥ್ಯವನ್ನು ಉತ್ತಮಪಡಿಸುವ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಅವರು ನುಡಿದರು.

ಹಲವು ಕಾರಣಗಳಿಂದ ನ್ಯಾಯ ವಿಳಂಬವಾಗುತ್ತಿರುವ ಈ ದಿನಗಳಲ್ಲಿ ಲೋಕ ಅದಾಲತ್ ಮೂಲಕ ನೊಂದವರು ನ್ಯಾಯಪಡೆಯುವುದರಿಂದ ಶೀಘ್ರ ನ್ಯಾಯ ಪಡೆಯಲು ಸಾಧ್ಯ ಎಂದರು. ಉಳಿದ ಕೋರ್ಟ್‌ಗಳಲ್ಲಿನ ನಿರ್ಧಾರವನ್ನು ಮತ್ತೆ ಪ್ರಶ್ನಿಸುವ ಅವಕಾಶವಿದ್ದರೆ ಲೋಕ ಅದಾಲತ್‌ನಲ್ಲಿ ದೊರೆತ ನ್ಯಾಯಕ್ಕೆ ಅಪೀಲು ಹಾಕುವಂತಿಲ್ಲ ಎಂದು ಲೋಕಾಯುಕ್ತರು ಹೇಳಿದರು.

ನ್ಯಾಯಾಲಯದ ಮೂಲಕ ತೀರ್ಪು ನೀಡುವುದಕ್ಕಿಂತ ಲೋಕ ಅದಾಲತ್, ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸುವುದು ಹೆಚ್ಚು ಪ್ರಯೋಜನ ಕಾರಿ. ನ್ಯಾಯಾಲಯದ ತೀರ್ಮಾನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದರಿಂದ ನ್ಯಾಯ ಸಿಗಲು ಸಾಕಷ್ಟು ವಿಳಂಬ ಆಗುತ್ತದೆ. ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದರೆ ಎರಡು ಕಡೆಯವರಿಗೆ ಸಂತೋಷ, ಸಮಾಧಾನಕರ ಮತ್ತು ತ್ವರಿತವಾಗಿ ತೀರ್ಮಾನ ಮಾಡಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗುತ್ತಿರುವ ವಿಚಾರ ಲೋಕಾಯುಕ್ತದ ಗಮನಕ್ಕೆ ಬಂದಿದ್ದು, ಸಂಬಂzsಪಟ್ಟ ಇಲಾಖೆಗಳಿಂದ ಮಾಹಿತಿಯನ್ನು ತರಿಸಲಾಗಿದ್ದು, ಸಾಮಾಜಿಕ ಅನಿಷ್ಠಗಳ ತಡೆಗೆ ಕ್ರಮಕೈಗೊಳ್ಳಲಾಗುವುದು. ಆದರೆ ಇದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವ ಕೆಲಸವಾಗಿರದೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಟಿ. ವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲತಾ ಸ್ವಾಗತಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಸಂತೋಷ್ ಹೆಬ್ಬಾರ್ ವಂದಿಸಿದರು. ನ್ಯಾಯವಾದಿ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಂದ ಮಕ್ಕಳ ಹಕ್ಕುಗಳ ಬಗ್ಗೆ ಬೀದಿನಾಟಕ ಪ್ರದರ್ಶನ ನಡೆಯಿತು.

Comments are closed.