ಕರಾವಳಿ

ಫರಂಗಿಪೇಟೆ ಡಬಲ್ ಮರ್ಡರ್ ಪ್ರಕರಣ : ಮತ್ತೆ ನಾಲ್ವರ ಬಂಧನ – ಬಂಧಿತರ ಸಂಖ್ಯೆ 11 ಕ್ಕೇರಿಕೆ

Pinterest LinkedIn Tumblr

ಮಂಗಳೂರು, ನವೆಂಬರ್. 18: ಫರಂಗಿಪೇಟೆಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಡಿಸಿಐಬಿ ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 11 ಕ್ಕೇರಿದೆ.

ಬಂಧಿತ ಆರೋಪಿಗಳನ್ನು ಅಡ್ಯಾರ್ ಕಣ್ಣೂರು ಹಾಗೂ ಬಜಲ್ ನಿವಾಸಿಗಳಾದ ಮುಹಮ್ಮದ್ ಹುಸೈನ್ ಯಾನೆ ಮುನ್ನಾ (26), ಮುಹಮ್ಮದ್ ಆಸಿಫ್ ಯಾನೆ ಮೂಸಾ ಅಚ್ಚಿ (27), ನೌಫಾಲ್ ಯಾನೆ ಟೊಪ್ಪಿ ನೌಫಾಲ್ (25), ಇಬ್ರಾಹಿಂ ಯಾನೆ ದೊಡ್ಡ ಪುತ್ತಾ (29) ಎಂದು ಗುರುತಿಸಲಾಗಿದೆ.

ಅ. 26ರಂದು ರಾತ್ರಿ ಫರಂಗಿಪೇಟೆಯ ಪೊಲೀಸ್ ಔಟ್ಪೋಸ್ಟ್ ಬಳಿ ನಡೆದ ಗ್ಯಾಂಗ್ವಾರ್ಗೆ ಝಿಯಾದ್ ಮತ್ತು ಫಯಾಝ್ ಎಂಬವರು ಕೊಲೆಗೀಡಾಗಿದ್ದರು. ಕ್ವಾಲಿಸ್ ಹಾಗೂ ಟೆಂಪೊದಲ್ಲಿ ಬಂದಿದ್ದ ಹಂತಕರು ಅಟ್ಟಾಡಿಸಿ ತಲವಾರು ದಾಳಿ ನಡೆಸಿದ್ದರು. ಈ ಘಟನೆಯಿಂದ ಅನೀಸ್, ಫೈಝಲ್ ಮತ್ತು ಮುಷ್ತಾಕ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹಳೆಯ ದ್ವೇಷವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು.

ಈ ಸಂಬಂಧ ಉಡುಪಿಯಲ್ಲಿ ಶುಕ್ರವಾರ ಡಿಸಿಐಬಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಲೆಮರೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಬಂಟ್ವಾಳ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಡಿಸಿಐಬಿ ಇನ್ಸ್ಪೆಕ್ಟರ್ ಅಮಾನುಲ್ಲ, ಪುತ್ತೂರು ಟ್ರಾಫಿಕ್ ಎಸ್ಸೈ ಜಗದೀಶ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್ಸೈ ಯಲ್ಲಪ್ಪ, ಸಿಬ್ಬಂದಿಗಳಾದ ಸಂಜೀವ ಪುರುಷ, ಉದಯ ರೈ, ಲಕ್ಷ್ಮಣ, ಇಕ್ಬಾಲ್, ಪ್ರವೀಣ್, ತಾರನಾಥ, ಪಳನಿ, ವಾಸುನಾಯ್ಕ, ಚಾಲಕ ವಿಜಯ ಗೌಡ, ವಾಸು ನಾಯ್ಕ ಬಂಟ್ವಾಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.