ಕುಂದಾಪುರ: ಖಾಸಗಿ ವೈದ್ಯರ ಮುಷ್ಕರದಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ 11 ತಿಂಗಳ ಮಗುವೊಂದು ಸಾವನ್ನಪ್ಪಿದ ಘಟನೆ ರಾಣಿಬೆನ್ನೂರಿನಲ್ಲಿ ವರದಿಯಾಗಿದೆ.
ಮೂಲತಃ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಸುಳ್ಸೆ ನಿವಾಸಿ ಪ್ರಸನ್ನ ಹಾಗೂ ಸುಲೋಚನಾ ದಂಪತಿಯ 11 ತಿಂಗಳ ಆರುಷಿ ಸಾವನ್ನಪ್ಪಿದ ಮಗು.
ಆರುಷಿ ಕಳೆದ ಕೆಲ ದಿನಗಳಿಂದ ಕಫದಿಂದ ಬಳಲುತ್ತಿದ್ದು ಈ ಹಿಂದೆಯೂ ಚಿಕಿತ್ಸೆ ಕೊಡಿಸಿದ್ದರು. ಶುಕ್ರವಾರ ಬೆಳಗ್ಗೆ ಕಫ ಉಲ್ಬಣಗೊಂಡಿದ್ದರಿಂದ ಕೂಡಲೇ ಆರುಷಿಯ ತಂದೆ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಚ್ಚಿದ್ದು, ತಕ್ಷಣ ಗದಗದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಅಷ್ಟರಲ್ಲಾಗಲೇ ಮಗುವಿನ ಸ್ಥಿತಿ ಗಂಭೀರಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.
ಮುಂದಿನ ತಿಂಗಳು ಹುಟ್ಟುಹಬ್ಬವಿತ್ತು..
ಪ್ರಸನ್ನ ಹಾಗೂ ಸುಲೋಚನಾ ಕಳೆದ ಎರಡು ವರ್ಷಳ ಹಿಂದೆ ವಿವಾಹವಾಗಿದ್ದರು. ಡಿಸೆಂಬರ್ 6ಕ್ಕೆ ಆರುಷಿ ಮೊದಲ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.