ಕರಾವಳಿ

ಪುತ್ತೂರು: ಚಲನಚಿತ್ರ ಸಪ್ತಾಹಕ್ಕೆ ಚಾಲನೆ

Pinterest LinkedIn Tumblr

ಮ0ಗಳೂರು ನವೆಂಬರ್ 17 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಮತ್ತು ರಾಷ್ಟ್ರ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನದ ಅಂಗವಾಗಿ ಚಲನಚಿತ್ರ ಸಪ್ತಾಹಕ್ಕೆ ಪುತ್ತೂರಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಪುತ್ತೂರಿನ ಅರುಣ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಚಲನಚಿತ್ರ ಸಪ್ತಾಹವನ್ನು ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಉತ್ತಮ ಸದಭಿರುಚಿಯುಳ್ಳ ಚಲನಚಿತ್ರಗಳು ಮೂಡಿಬರುವುದು ಇಂದಿನ ಅಗತ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಇಂತಹ ಚಿತ್ರಗಳಿಗೆ ಅವಕಾಶ ಸಿಗದೆ, ಸಿನಿಮಾ ಪ್ರಿಯರಿಗೆ ಸದಭಿರುಚಿಯ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಇಲ್ಲದಂತಾಗಿದೆ ಎಂದು ಹೇಳಿದರು.

ವಾರ್ತಾ ಇಲಾಖೆಯು ಪುತ್ತೂರಿನಲ್ಲಿ ಚಲನಚಿತ್ರ ಸಪ್ತಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ. ಇದರಿಂದ ಗ್ರಾಮೀಣ ನಾಗರೀಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಪರೂಪದ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಒದಗಿಬಂದಿದೆ ಎಂದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಮಾತನಾಡಿ, ಆಧುನಿಕ ತಂತ್ರಜ್ಞಾನದ ಕ್ರೀಡೆಗಳಲ್ಲಿ ತಲ್ಲೀನವಾಗುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಸಾಮಾಜಿಕ ಸಂದೇಶವುಳ್ಳ ಚಲನಚಿತ್ರಗಳನ್ನು ತೋರಿಸುತ್ತಿರುವುದು ಪ್ರಶಂಸಾರ್ಹವಾಗಿದೆ.

ಚಲನಚಿತ್ರ ಸಪ್ತಾಹಕ್ಕೆ ಪುತ್ತೂರು ವ್ಯಾಪ್ತಿಯ ಆಯ್ದ ಶಾಲಾ ವಿದ್ಯಾರ್ಥಿಗಳನ್ನು ಚಿತ್ರ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಸದಸ್ಯರಾದ ಸ್ವರ್ಣಲತಾ ಹೆಗ್ಡೆ, ಜೆಸಿಂತಾ ಮಸ್ಕರೇಂಞಸ್, ಚಿತ್ರಮಂದಿರದ ಮಾಲೀಕ ನವೀನ್‍ಚಂದ್ರ ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಸ್ವಾಗತಿಸಿ, ಚಲನಚಿತ್ರ ಸಪ್ತಾಹದಲ್ಲಿ ನವೆಂಬರ್ 23ರವರೆಗೆ ಪ್ರತೀದಿನ ಬೆಳಿಗ್ಗೆ 9 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು. ವಾರ್ತಾ ಇಲಾಖೆಯ ಫ್ರಾನ್ಸಿಸ್ ಲೂಯಿಸ್ ವಂದಿಸಿದರು.

ಉದ್ಘಾಟನೆ ಪ್ರಯುಕ್ತ ಶುಕ್ರವಾರ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ‘ಅಮರಾವತಿ’ ಪ್ರದರ್ಶನಗೊಂಡಿತು. ನ.18ರಂದು ‘ಕಿರಿಕ್ ಪಾರ್ಟಿ’, ನವೆಂಬರ್ 19 ರಂದು ‘ರಾಮ ರಾಮ ರೇ’, ನವೆಂಬರ್ 20 ರಂದು ತುಳು ಚಲನಚಿತ್ರ ‘ಮದಿಪು’, ನವೆಂಬರ್ 21 ರಂದು ‘ಯೂಟರ್ನ್’, ನವೆಂಬರ್ 22 ರಂದು ‘ಅಲ್ಲಮ’, ನವೆಂಬರ್ 23 ರಂದು ‘ಮಾರಿಕೊಂಡವರು’ ಪ್ರದರ್ಶನಗೊಳ್ಳಲಿದೆ.

Comments are closed.