ಕುಂದಾಪುರ : 2010 ನೇ ಮೇ.31 ರಂದು ಕುಂದಾಪುರದಲ್ಲಿ ನಡೆದ ಸುಲಿಗೆ ಹಾಗೂ ಕೊಲೆ ಯತ್ನದ ಮೂರು ಪ್ರತ್ಯೇಕ ಪ್ರಕರಣಗಳ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೇರಳ ಮೂಲದ ರಘು ಹಾಗೂ ರಾಜೇಶ್ ಅಪರಾಧಿಗಳಾಗಿದ್ದು ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ದಂಡ ವಿಧಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಕಟಿಸಿದೆ.
2010 ನೇ ಮೇ.31 ರಂದು ರಾತ್ರಿ ಕುಂದಾಪುರದಲ್ಲಿ ಮನೆಯೊಂದರ ಬಾಗಿಲಿನ ಚಿಲಕವನ್ನು ಮುರಿದು ದರೋಡೆಗೆ ಪ್ರಯತ್ನಿಸುತ್ತಿದ್ದ ವೇಳೆ ಇವರನ್ನು ಹಿಡಿಯಲು ಯತ್ನಿಸಿದ್ದ ವಿವೇಕ್ ಎನ್ನುವವರಿಗೆ ಚೂರಿಯಿಂದ ಇರಿದು ಅವರ ಕೈಯಲ್ಲಿ ಇದ್ದ ದುಬಾರಿ ಬೆಲೆಯ ಮೊಬೈಲ್‌ನ್ನು ಅಪಹರಿಸಿದ ರಘು ಹಾಗೂ ರಾಜೇಶ್ ಪರಾರಿಯಾಗಿದ್ದರು. ಬಳಿಕ ನಗರದ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸುಗಳಲ್ಲಿ ನಿದ್ರಿಸಿದ್ದ ಸಂತೋಷ್ ಹೆಂಗವಳ್ಳಿ ಹಾಗೂ ರವಿ ಎನ್ನುವ ವಾಹನದ ಕ್ಲೀನರ್‌ಗಳ ಮೇಲೆ ಚೂರಿ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ಅಪಹರಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಕುಂದಾಪುರದ ಸರ್ಕಲ್ ಇನ್ಸ್‌ಪೆಕ್ಟರ್ ಮದನ್ ಗಾಂವ್ಕರ್ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಸುಲಿಗೆ ಹಾಗೂ ಕೊಲೆ ಯತ್ನದ ಅಪರಾಧದ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 24 ಸಾಕ್ಷಿಗಳ ಪೈಕಿ 11 ಸಾಕ್ಷಿಗಳ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಳ್ಳಲಾಗಿತ್ತು.
ಸರ್ಕಾರಿ ಅಭಿಯೋಜಕರಾದ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಹಾಗೂ ಹರೀಶ್ಚಂದ್ರ ಉದ್ಯಾವರ ಆರೋಪಿಗಳ ವಿರುದ್ದ ಹೊರಿಸಲಾದ ಆರೋಪಗಳನ್ನು ಸಾಧಿಸಿದ್ದರು. ವಿಚಾರಣೆ ನಡೆಸಿದ್ದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಪ್ರಕರಣಗಳಲ್ಲಿನ ಸಂತ್ರಸ್ತರಿಗೆ ತಲಾ 30,000 ದಂಡ ನೀಡುವಂತೆ ಆದೇಶ ಪ್ರಕಟಿಸಿದ್ದಾರೆ.
ಪೊಲೀಸ್ ಪೇದೆಯನ್ನು ಕೊಂದಿದ್ದರು:
ಮೇ.31 ರ ರಾತ್ರಿ ವಿವಿದೆಡೆ ದರೋಡೆ ಹಾಗೂ ಸುಲಿಗೆ ಪ್ರಕರಣದ ಆರೋಪಿಗಳಾಗಿದ್ದ ಈ ಇಬ್ಬರು ಆರೋಪಿಗಳು ಅದೇ ದಿನದ ತಡರಾತ್ರಿ ನಡೆದ ಪೊಲೀಸ್ ಜೀಪ್ ಚಾಲಕ ಶ್ರೀಧರ್ ಬೈಂದೂರು ಎನ್ನುವವರ ಕೊಲೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಶಿಕ್ಷೆಯನ್ನು ಈ ಹಿಂದೆಯೇ ಪ್ರಕಟಿಸಿತ್ತು.