ಕರಾವಳಿ

ಮನಪಾ ವ್ಯಾಪ್ತಿಯಲ್ಲಿ ನೀರಿನ ಬಿಲ್ ಬಾಕಿಯಿದ್ದರೆ ನೀರಿನ ಸಂಪರ್ಕ ಕಡಿತ : ಮೇಯರ್

Pinterest LinkedIn Tumblr

ಮಂಗಳೂರು, ನವೆಂಬರ್. 14: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಪಾವತಿಗೆ ಬಾಕಿ ಇರುವವರು ಕೂಡಲೇ ಪಾವತಿಸ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಂಪರ್ಕ ಕಡಿತ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಪಾಲಿಕೆ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಪಾವತಿಗೆ ಬಾಕಿ ಇರುವವರು ಪಾವತಿಸುವ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಆರಂಭಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿ ಬಾಕಿ ಪಾವತಿಗೆ ಸಂಬಂಧಿಸಿ ನಡೆಸಲಾದ ಅಭಿಯಾನದಿಂದಾಗಿ ಸಾರ್ವಜನಿಕರೇ ಖುದ್ದಾಗಿ ಬಿಲ್ ಪಾವತಿಸುವ ಮೂಲಕ 3.20 ಕೋಟಿ ರೂ. ಸಂಗ್ರಹವಾಗಿದೆ. ಅಧಿಕಾರಿಗಳು ಸ್ಥಳಗಳಿಗೆ ತೆರಳಿ 13 ಲಕ್ಷ ರೂ. ಬಾಕಿ ಸಂಗ್ರಹ ಮಾಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ನಗರದಲ್ಲಿ ಅಕ್ರಮ ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನಪಾದ ಗಮನಕ್ಕೆ ಬಂದ 38 ಸಂಪರ್ಕಗಳನ್ನು ಈಗಾಗಲೇ ಕಡಿತಗೊಳಿಸಲಾಗಿದೆ. ನಗರದಲ್ಲಿ ಒಟ್ಟು 87,773 ನೀರಿನ ಸಂಪರ್ಕಗಳಿವೆ.

ಇವುಗಳಲ್ಲಿ 80,612 ಗೃಹೋಪಯೋಗಿ ಬಳಕೆಯ ಸಂಪರ್ಕಗಳಾಗಿವೆ. 4,869 ಸಂಪರ್ಕಗಳು ಅಂಗಡಿಗಳದ್ದಾಗಿದ್ದು, 1,033 ವಾಣಿಜ್ಯ ಉಪಯೋಗದ ಸಂಪರ್ಕಗಳು, 1,251 ಸಂಪರ್ಕಗಳು ಕಟ್ಟಡ ರಚನೆಯದ್ದಾಗಿವೆ. ಪ್ರಸ್ತುತ ಮನಪಾಕ್ಕೆ ಕಳೆದ ಸುಮಾರು ಮೂರು ವರ್ಷಗಳಿಂದ 10,000 ರೂ. ಮೇಲ್ಪಟ್ಟ ಬಾಕಿಗೆ ಸಂಬಂಧಿಸಿ 4,301 ಸಂಪರ್ಕಗಳಿಂದ 12,64,36,759 ರೂ.ಕುಡಿಯುವ ನೀರಿನ ಬಾಕಿ ಬಿಲ್ ಪಾವತಿಯಾಗಬೇಕಿದೆ ಎಂದು ಮೇಯರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಅಯುಕ್ತ ಮುಹಮ್ಮದ್ ನಝೀರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.

Comments are closed.