ಕರಾವಳಿ

ಶ್ರೀ ಕ್ಷೇತ್ರ ಕಟೀಲು ಆರು ಯಕ್ಷಗಾನ ಮೇಳಗಳ ತಿರುಗಾಟ ಆರಂಭ :ರಾಜಿನಾಮೆ ನೀಡಿದವರಲ್ಲಿ ಒಂಭತ್ತು ಮಂದಿ ವಾಪಸ್ಸು

Pinterest LinkedIn Tumblr

ಮಂಗಳೂರು, ನವೆಂಬರ್ 14 : ಶ್ರೀ ಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಲಾಗಿದೆ.

ಸಣ್ಣಪುಟ್ಟ ವಿವಾದಗಳಿಗೆ ತೆರೆ ಎಳೆದ ಆಡಳಿತ ಮಂಡಿಳಿಯು 2017-18 ನೇ ಸಾಲಿನ ಶ್ರೀ ಕ್ಷೇತ್ರದ ಸೇವೆ ಬಯಲಾಟಗಳ ತಿರುಗಾಟವನ್ನು ಆರಂಭಿಸಿದೆ.ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತಪದ್ಮನಾಭ ಅಸ್ರಣ್ಣ 6 ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದ್ದಾರೆ.

ಶ್ರೀ ಕ್ಷೇತ್ರ ಕಟೀಲಿನಲ್ಲಿ ನಿನ್ನೆ ಸಂಜೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಗೆಜ್ಜೆ ಮುಹೂರ್ತ ನಡೆದು ಎಲ್ಲಾ 6 ಮೇಳಗಳ ಹನ್ನೆರಡು ಮಂದಿ ವೇಷಧಾರಿಗಳು ಭಾಗವತಿಕೆ ಹಿಮ್ಮೇಳಗಳ ಸಹಿತ ಯಕ್ಷ ನಾಟ್ಯ ಪ್ರದಕ್ಷಿಣೆ, ಗಣಪತಿ ಸನ್ನಿಧಿಯಲ್ಲಿ ಯಕ್ಷಗಾನ ನಾಟ್ಯ ಸೇವೆ ನಡೆಸಿದರು.

ಶ್ರೀ ಕ್ಷೇತ್ರದ 6 ಮೇಳಗಳ ದೇವರ ಪೆಟ್ಟಿಗೆ ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಸರಸ್ವತಿ ಸದನದಲ್ಲಿನ ಚೌಕಿಯಲ್ಲಿ ಪೂಜೆ ಸಲ್ಲಿಸಲಾಯಿತು. 6 ಯಕ್ಷಗಾನ ಮೇಳಗಳ ತಿರುಗಾಟ ಆರಂಭದ ಮೊದಲ ಹಂತವಾಗಿ ಕ್ಷೇತ್ರದ ರಥಬೀದಿಯಲ್ಲಿ ನಿರ್ಮಿಸಲಾಗಿದ್ದ 6 ಯಕ್ಷ ರಂಗಗಳಲ್ಲಿ ನಿನ್ನೆ ರಾತ್ರಿ ಬಯಲಾಟ ಪ್ರದರ್ಶನ ನಡೆಯಿತು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದದಿಂದ ಹೊರಡುವ ಆರೂ ಮೇಳಗಳು ಈ ಬಾರಿ ಹೊಸ ರೂಪದಿಂದ ಹೊರಡಲಿದೆ. 6 ಮೇಳಗಳಿಗೆ ಸುಮಾರು 20 ವರ್ಷಕ್ಕಾಗುವಷ್ಟು ಯಕ್ಷಗಾನಗಳೂ ಈಗಾಗಲೇ ಬುಕ್ಕಿಂಗ್ ಆಗಿವೆ. ಇವುಗಳಲ್ಲಿ ಸುಮಾರು 500 ಯಕ್ಷಗಾನ ಪ್ರದರ್ಶನಗಳು ಖಾಯಂ ಆಡಿಸುವ ಯಕ್ಷಗಾನವಾಗಿದೆ.

ಮೇಳಗಳ ತಿರುಗಾಟಕ್ಕಿದ್ದ ಬಸ್‍ಗಳೆಲ್ಲವೂ ಹಳೆಯದಾಗಿರುವುದರಿಂದ ಅವುಗಳ ಬದಲಿಗೆ ಈ ವರ್ಷದಿಂದ ಕಲಾವಿದರು ಹಾಗೂ ಸಿಬ್ಬಂದಿಗಳಿಗೆ ಉಪಯೋಗವಾಗುವಂತೆ ವಿಷೇಶವಾಗಿ ವಿನ್ಯಾಸಗೊಳಿಸಿದ ಹೊಸ ಬಸ್ಸುಗಳನ್ನು ಒದಗಿಸಲಾಗಿದೆ.

ಜೊತೆಗೆ ಸಾಮಾಗ್ರಿಗಳ ಸಾಗಾಣಿಕೆಗೆ ಪ್ರತ್ಯೇಕ ಆರು ಲಾರಿಗಳನ್ನು ಮೇಳಕ್ಕೆ ನೀಡಲಾಗಿದ್ದು ಅದಲ್ಲದೇ ಸೇವಾದಾರರಿಗೆ ಉಪಯೋಗ ವಾಗುವಂತೆ ರಂಗಸ್ಥಳ ಮತ್ತು ಚೌಕಿಗೆ ವಿದ್ಯುದಲಂಕಾರ ಧ್ವನಿವರ್ಧಕಗಳನ್ನು, ಪ್ರತೀ ಮೇಳಕ್ಕೆ ಎರಡು ಹೊಸ ಜನರೇಟರ್ ಗಳನ್ನು ನೀಡಲಾಗಿದೆ.

25ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರಿಂದ ಉಚಿತ ಸೇವೆ:

ಕಟೀಲು ಮೇಳದಲ್ಲಿ ಉಚಿತ ಸೇವೆ ಸಲ್ಲಿಸಲು 25ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು ಮಂದೆ ಬಂದಿದ್ದಾರೆ. ಹೊಸ ಆರು ಸಮರ್ಥ ಕಲಾವಿದರನ್ನು ಮೇಳಕ್ಕೆ ಸೇರಿಸಿಕೊಳ್ಳಲಾಗಿದೆ. ಮೇಳಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 15ಕ್ಕೂ ಮಿಕ್ಕ ಕಲಾವಿದರಿಗೆ ಬಡ್ತಿ ನೀಡಲಾಗಿದೆ ಎಂದು ಮೇಳದ ಮೂಲ ತಿಳಿಸಿದೆ.

ಪಟ್ಲ ಸತೀಶ್ ಶೆಟ್ಟಿ 4 ನೇ ಮೇಳಕ್ಕೆ ವರ್ಗಾವಣೆ : 

ಯಕ್ಷಗಾನ ರಂಗದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಈ ಬಾರಿ ಶ್ರೀ ಕ್ಷೇತ್ರ ಕಟೀಲಿನ 4 ನೇ ಮೇಳದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಇದೇ ವೇಳೆ ಐದನೇ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟರ ವರ್ಗಾವಣೆ ವಿರೋಧಿಸಿ ರಾಜೀನಾಮೆ ನೀಡಿದ್ದ 23 ಕಲಾವಿದರಲ್ಲಿ ಒಂಭತ್ತು ಮಂದಿ ಮತ್ತೆ ಮೇಳಕ್ಕೆ ಹಿಂದಿರುಗಿದ್ದಾರೆ.

ಉಳಿದ ಎಂಟು ಮಂದಿಯನ್ನು ಮೇಳಕ್ಕೆ ಸೇರಿಸಿಕೊಳ್ಳದಿರುವ ನಿರ್ಧಾರಕ್ಕೆ ಆಡಳಿತ ಮಂಡಳಿಯೇ ಬಂದಂತಿದೆ. ಇನ್ನೂ ಆರು ಮಂದಿಯ ಭವಿಷ್ಯ ಅತಂತ್ರವಾಗಿದೆ. ರಾಜೀನಾಮೆ ಪ್ರಹಸನಕ್ಕೆ ಮೂಲ ಕಾರಣ ಎನ್ನಲಾದ ಎಂಟು ಮಂದಿ ಕಲಾವಿದರ ಹೊರತಾಗಿ ಉಳಿದ ಕಲಾವಿದರಿಗೆ ಯಜಮಾನರ ಕಡೆಯಿಂದ ಫೋನ್ ಕರೆ ಮಾಡಲಾಗಿತ್ತು. ಅವರ ನಿಲುವು ಸ್ಪಷ್ಟಪಡಿಸುವಂತೆ ಕೇಳಲಾಗಿತ್ತು. ಒಂಭತ್ತು ಕಲಾವಿದರು ಮತ್ತೆ ಮೇಳಕ್ಕೆ ಹಿಂದಿರುಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಉಳಿದ ಆರು ಕಲಾವಿದರು ಸರಿಯಾದ ನಿಲುವು ತಿಳಿಸಿಲ್ಲ. ಆದುದರಿಂದ ಅವರ ಸ್ಥಿತಿ ಅತಂತ್ರವಾಗಿದೆ.

Comments are closed.