ಮಂಗಳೂರು, ನವೆಂಬರ್. 9: ದ.ಕ.ಜಿಲ್ಲೆಯಲ್ಲಿ ನಾಳೆ ಟಿಪ್ಪು ಜಯಂತಿ ಹಾಗೂ ಬಿಜೆಪಿಯ ಪರಿವರ್ತನಾ ಯಾತ್ರೆ ಒಂದೇ ದಿನ ನಡೆಯಲಿರುವುದರಿಂದ ಈ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರ ನೇತ್ರತ್ವದಲ್ಲಿ ಬುಧವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಯಿತು.
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಡಿಜಿಪಿ ಕಮಲ್ ಪಂತ್ ಅವರು, ಟಿಪ್ಪು ಜಯಂತಿ ಮತ್ತು ಬಿಜೆಪಿ ವತಿಯಿಂದ ಪರಿವರ್ತನಾ ರ್ಯಾಲಿ ನ.10ರಂದು ನಡೆಯಲಿದೆ.ಈ ಸಂದರ್ಭದಲ್ಲಿ ಯಾವೂದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಟಿಪ್ಪು ಜಯಂತಿ ಹಿನ್ನೆಲಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಭದ್ರತಾ ಕಾರ್ಯಕ್ಕೆ 2,000 ಪೊಲೀಸರನ್ನು ಪೊಲೀಸರನ್ನು ನಿಯೋಜಿಸಲಾಗಿದೆ, ಇದರ ಜೊತೆಗೆ ರಾಜ್ಯ ಮೀಸಲು ಪೊಲೀಸ್ ಪಡೆಯ 13 ತುಕಡಿ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್ ಎ ಎಫ್) ಒಂದು ಕಂಪನಿ ನಗರದಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಟಿಪ್ಪುಜಯಂತಿ ಸರಕಾರಿ ಕಾರ್ಯಕ್ರಮವಾಗಿದ್ದು, ಇದರ ವಿರುದ್ಧ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಇದೇ ವೇಳೆ ಸಮಾಜ ಘಾತುಕ ಶಕ್ತಿಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಿದೆ ಎಂದರು. ಬಿಜೆಪಿ ವತಿಯಿಂದ ನಡೆಯುವ ಪರಿವರ್ತನಾ ರ್ಯಾಲಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಕಾನೂನಿಗೆ ವಿರುದ್ಧವಾಗಿ ನಡೆಯುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಕುರಿತು ಪರಿಸ್ಥಿತಿ ಆಧರಿಸಿ ಸ್ಥಳೀಯ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ ಎಂದು ಕಮಲ್ ಪಂತ್ ಹೇಳಿದ್ದಾರೆ. ಈ ವೇಳೆ ಐ.ಜಿ.ಪಿ. ಹೇಮಂತ್ ನಿಂಬಲ್ಕರ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಅಡ್ಡಗೋಡೆಯ ಮೇಲೆ ದೀಪ :
ಬಿಜೆಪಿಯ ಪರಿವರ್ತನಾ ಸಮಾವೇಶಗಳ ಮೇಲೂ ಪೊಲೀಸರ ಅನುಮಾನದ ದೃಷ್ಠಿ ಬಿದ್ದಿದ್ದು. ಪರಿವರ್ತನಾ ರ್ಯಾಲಿಗೆ ಅನುಮತಿ ಕೋರಿ ಬಂದಿರುವ ಪತ್ರಗಳನ್ನು ಇನ್ನೂ ಖಡತಗಳಲ್ಲೇ ಇಡಲಾಗಿದೆ.ಬಿ.ಜೆ.ಪಿ ರ್ಯಾಲಿ ಇಂದಲೂ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುವ ಸಂಭವ ಇರುವ ಬಗ್ಗೆ ಶಂಕಿಸುತ್ತಿರುವ ಪೊಲೀಸರು ಪರಿವರ್ತನಾ ರ್ಯಾಲಿಗೆ ಅನುಮತಿ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ಟಿಪ್ಪು ಜಯಂತಿ ಹಾಗೂ ಬಿಜೆಪಿಯ ಪರಿವರ್ತನಾ ಯಾತ್ರೆ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಲ್ಲಿ 127 ಗೂಂಡಾಗಳಿಂದ ಭದ್ರತಾ ಬಾಂಡ್ ಪಡೆದಿಯಲಾಗಿದೆ.