ಕರಾವಳಿ

ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿಯವರಿಗೆ ಪೂರ್ಣಕುಂಭ ಸ್ವಾಗತ -ಮಂಜುನಾಥ ಸ್ವಾಮಿ ದರ್ಶನ ಪಡೆದ ಮೋದೀಜಿ

Pinterest LinkedIn Tumblr

ಬೆಳ್ತಂಗಡಿ, ಅಕ್ಟೋಬರ್.29: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 11 ಗಂಟೆ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಪ್ರಧಾನಿಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಬಳಿಕ ಪ್ರಧಾನಿಯವರನ್ನು ಡಾ.ಹೆಗ್ಗಡೆವರು ದೇಗುಲದ ಒಳಗಡೆ ಕರೆದೊಯ್ದರು. ಪ್ರಧಾನಿ ಮೋದಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.ನಂತರ ಕೆಲಕಾಲ ಧ್ಯಾನ ಮಾಡಿದರು.

ದೇಗುಲದ ಪ್ರಾಕಾರದಲ್ಲಿರುವ ಅಣ್ಣಪ್ಪ ಸ್ವಾಮಿ, ಮಹಾಗಣಪತಿ, ಅಮ್ಮನವರ ದರ್ಶನ ಪಡೆದರು. 20 ನಿಮಿಷಗಳ ಕಾಲ ಮೋದಿ ಅಲ್ಲಿದ್ದರು. ಧರ್ಮಸ್ಥಳ ದೇಗುಲದ ಒಳಪ್ರವೇಶಿಸಬೇಕಿದ್ದರೆ ಸಂಪ್ರದಾಯ ಪ್ರಕಾರ ಅಂಗಿ, ಬನಿಯನ್ ತೆಗೆಯಬೇಕು. ಹೀಗಾಗಿ ಪ್ರದಾನಿಯವರು ದೇವಸ್ಥಾನದ ಗರ್ಭಗುಡಿ ಪ್ರವೇಶಿಸುವಾಗ ವಸ್ತ್ರ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದಾರೆ.

ಸ್ವಾಮಿಗೆ ಪೂಜೆ ಸಲ್ಲಿಸುವವರೆಗೂ ಬೆಳಗ್ಗೆಯಿಂದ ಉಪವಾಸ ವೃತ ಆಚರಿಸಿದ್ದ ಮೋದಿಯವರು ದೇವರ ದರ್ಶನ ಹಾಗೂ ಪೂಜೆ ಬಳಿಕ ಪ್ರಸಾದ ಸ್ವೀಕರಿಸಿದರು. ಪ್ರಧಾನಿಯವರಿಗೆ ಉಪಾಹಾರವನ್ನು ಧರ್ಮಸ್ಥಳ ಕ್ಷೇತ್ರದ ಸುತ್ತುಪೌಳಿಯ ಹೊರಭಾಗದಲ್ಲಿರುವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಖುದ್ದು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಶ್ರೀಮತಿಯವರು, ಮಕ್ಕಳು, ಸಹೋದರರು ಅವರ ಮಡದಿ ಮಕ್ಕಳು ಉಪಾಹಾರ ಬಡಿಸಿ ಸತ್ಕಾರಗೈದರು.

Comments are closed.